ADVERTISEMENT

ಪ್ರೌಢಶಾಲೆವರೆಗೂ ಸಂಸ್ಕೃತ ಕಡ್ಡಾಯ- ಭೈರಪ್ಪ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 5:00 IST
Last Updated 7 ಫೆಬ್ರುವರಿ 2012, 5:00 IST
ಪ್ರೌಢಶಾಲೆವರೆಗೂ ಸಂಸ್ಕೃತ ಕಡ್ಡಾಯ- ಭೈರಪ್ಪ ಆಗ್ರಹ
ಪ್ರೌಢಶಾಲೆವರೆಗೂ ಸಂಸ್ಕೃತ ಕಡ್ಡಾಯ- ಭೈರಪ್ಪ ಆಗ್ರಹ   

ಬೆಂಗಳೂರು: `ಭಾರತದ ಜನ ಜೀವನದ ಭಾಷೆಯಾದ ಸಂಸ್ಕೃತವನ್ನು ಪ್ರೌಢಶಾಲೆಗಳ ವರೆಗೂ ಕಡ್ಡಾಯಗೊಳಿಸಬೇಕು~ ಎಂದು ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಒತ್ತಾಯಿಸಿದರು.

ನಗರದಲ್ಲಿ ಸೋಮವಾರ ಸಂಸ್ಕೃತ ಭಾರತಿ ಆಯೋಜಿಸಿದ್ದ ಭೈರಪ್ಪನವರ `ವಂಶವೃಕ್ಷ~ ಮತ್ತು `ತಬ್ಬಲಿಯು ನೀನಾದೆ ಮಗನೆ~ ಕಾದಂಬರಿಗಳ ಸಂಸ್ಕೃತ ಅನುವಾದ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

`ಸಂಸ್ಕೃತವನ್ನು ಉಳಿಸುವ ಮೂಲಕ ನಾವು ಆ ಭಾಷೆಯನ್ನು ಉದ್ಧಾರ ಮಾಡುತ್ತೇವೆ ಎಂಬ ಭ್ರಮೆಗಿಂತ ಆ ಮೂಲಕ ನಮ್ಮ ಉದ್ಧಾರ ಸಾಧ್ಯವಿದೆ ಎಂಬ ಅರಿವಿನೊಂದಿಗೆ ಸಂಸ್ಕೃತದ ಉಳಿವಿಗೆ ಮುಂದಾಗಬೇಕು. ಹಲವು ಕ್ಷೇತ್ರಗಳಿಗೆ ಪರಿಭಾಷೆಯನ್ನು ನೀಡಿರುವ ಸಂಸ್ಕೃತವನ್ನು ಉಳಿಸಲು ಶಾಲೆಗಳಲ್ಲಿ ಸಂಸ್ಕೃತವನ್ನು 50 ಅಂಕಗಳಿಗೆ ಒಂದು ವಿಷಯವಾಗಿ ಕಡ್ಡಾಯಗೊಳಿಸಬೇಕು.  ಮಕ್ಕಳಿಗೆ ಭಾರತದ ಮೂಲ ಸಂಸ್ಕೃತಿಯನ್ನು ಅರಿಯಲು ಇದು ನೆರವಾಗುತ್ತದೆ~ ಎಂದು ಅಭಿಪ್ರಾಯ ಪಟ್ಟರು.

`ಭಾರತದ ಎಲ್ಲ ಭಾಷೆಗಳ ಮೂಲ ಬೇರು ಸಂಸ್ಕೃತ ಭಾಷೆ. ದಕ್ಷಿಣ ಭಾರತದ ದ್ರಾವಿಡ ಭಾಷೆಗಳು ಸಂಸ್ಕೃತ ಮೂಲ ಹೊಂದಿಲ್ಲ ಎಂದು ಹೇಳಿದರೂ, ಇಲ್ಲಿನ ಜನ ಜೀವನದಲ್ಲಿ ಸಂಸ್ಕೃತ ಭಾಷೆಯ ಸತ್ವ ಉಳಿದುಕೊಂಡಿದೆ.

ಹಿಂದಿನಿಂದಲೂ ಸಂಸ್ಕೃತ ಭಾಷೆಯನ್ನು ಕನ್ನಡ ವಿರೋಧಿ ಭಾಷೆ ಎಂಬಂತೆ ನೋಡುತ್ತಾ ಬರಲಾಗಿದೆ. ಕನ್ನಡ ಭಾಷೆಯ ಅಭಿಮಾನದ ಜೊತೆಗೇ ಸಂಸ್ಕೃತ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಆದರೆ ಸಂಸ್ಕೃತದ ಬಗ್ಗೆ ಇಂದು ಅನಾದರ ಹೆಚ್ಚಾಗಿದೆ~ ಎಂದು ವಿಷಾದ ವ್ಯಕ್ತ ಪಡಿಸಿದರು.

`ಭಾರತೀಯ ಸಂಸ್ಕೃತಿಯಲ್ಲಿ ಗೋವು ತಾಯಿ ಸಮಾನವಾದುದ್ದು. ಸಾವಯವ ಕೃಷಿಯ ಬಗ್ಗೆ ಹೆಚ್ಚು ಒಲವು ತೋರುತ್ತಿರುವ ಇಂದಿನ ಸಂದರ್ಭದಲ್ಲಿ ಗೋವುಗಳ ಸಂತತಿಯ ರಕ್ಷಣೆಯಾಗದೇ ಸಾವಯವ ಕೃಷಿ ಸಾಧ್ಯವಿಲ್ಲ. ಆದರೆ ರಾಜ್ಯ ಸರ್ಕಾರ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತರುವ ಬದಲು, ಆ ವಿಚಾರವನ್ನೇ ಹುಲಿಯ ಬಾಯಿಗೆ ಹಾಕಿದಂತಿದೆ~ ಎಂದರು.

`ವಂಶವೃಕ್ಷ ಕೃತಿ ವಿಧವಾ ವಿವಾಹವನ್ನು ವಿರೋಧಿಸುವ ಕಾದಂಬರಿ ಎಂದು ಅದು ಬಂದ ಸಂದರ್ಭದಲ್ಲಿ ಟೀಕೆಗಳು ಕೇಳಿಬಂದವು. ಆದರೆ ನಿಜವಾಗಿ ವಂಶವೃಕ್ಷ ಕಾದಂಬರಿ ವಂಶದ ಮುಂದುವರಿಕೆಯ ಬಗ್ಗೆ, ವಿಧವೆಯ ತಳಮಳಗಳ ಬಗ್ಗೆ ರಚನೆಗೊಂಡ ಕೃತಿ. ವಂಶವೃಕ್ಷ ಕಾದಂಬರಿ ಬರೆದು 47 ವರ್ಷ ಹಾಗೂ ತಬ್ಬಲಿಯು ನೀನಾದೆ ಮಗನೆ ಕಾದಂಬರಿ ರಚನೆಯಾಗಿ ಇಲ್ಲಿಗೆ ಅರ್ಧ ಶತಮಾನ ಕಳೆದಿದೆ. ಈಗ ಈ ಕಾದಂಬರಿಗಳು ಸಂಸ್ಕೃತಕ್ಕೆ ಅನುವಾದಗೊಂಡಿರುವುದು ಸಂತಸ ತಂದಿದೆ. ಸಂಸ್ಕೃತದ ಮೂಲಕವೂ ಕಾದಂಬರಿಗಳ ಆಶಯ ಎಲ್ಲರನ್ನೂ ತುಪಲಿ~ ಎಂದು ಅವರು ಆಶಿಸಿದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ ಕೃತಿಗಳ ಬಗ್ಗೆ ತಿಳಿಸುತ್ತಾ, `ಕನ್ನಡದಲ್ಲಿ ಬರೆಯುತ್ತಿರುವ ಪ್ರಮುಖ ಭಾರತೀಯ ಕಾದಂಬರಿಕಾರ ಭೈರಪ್ಪ. ಭಾರತೀಯ ಸಂಸ್ಕೃತಿಯನ್ನೇ ಮೂಲ ವಸ್ತುವಾಗಿ ಉಳ್ಳ ಅವರ ಕಾದಂಬರಿಗಳು ಸಂಸ್ಕೃತದ ಅನುವಾದಕ್ಕೆ ಒಗ್ಗಿಕೊಳ್ಳುವ ಗುಣ ಹೊಂದಿವೆ. ಬದುಕಿನ ಅನ್ವೇಷಣೆ ಅವರ ಎಲ್ಲ ಕೃತಿ ಜೀವಾಳ~ ಎಂದರು.

ಕೃತಿಗಳನ್ನು ಬಿಡುಗಡೆಗೊಳಿಸಿದ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಡಾ.ಎಚ್.ಹರೀಶ್ ಹಂದೆ ಮಾತನಾಡಿ, `ಭಾರತೀಯ ಸಂಸ್ಕೃತಿಯ ಮೂಲ ಸತ್ವವನ್ನು ಬಂಗಾಳದ ಶಾಂತಿ ನಿಕೇತನದಲ್ಲಿ ಕಲಿಸಲಾಗುತ್ತದೆ. ಅದೇ ಮಾದರಿಯಲ್ಲಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ವಿಶೇಷ ಶಾಲೆಗಳನ್ನು ಸರ್ಕಾರ ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು.

`ವಂಶವೃಕ್ಷ~ ಕೃತಿಯ ಅನುವಾದಕ ಜನಾರ್ದನ ಹೆಗಡೆ, ತಬ್ಬಲಿಯು ನೀನಾದೆ ಮಗನೆ ಕೃತಿಯ  ಅನುವಾದಕ ಗಣಪಯ್ಯ ಹೊಳ್ಳ, ಶಿಕ್ಷಣ ತಜ್ಞ ಎಂ.ಆರ್.ದೊರೆಸ್ವಾಮಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಪ್ರಧಾನ ಗುರುದತ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.