ಬೆಂಗಳೂರು: `ತತ್ಕಾಲ್~ ಅರ್ಜಿಗೆ ಐಎಫ್‌ಎಸ್ ಅಧಿಕಾರಿ ಸಹಿಯನ್ನು ನಕಲು ಮಾಡಿ (ಫೋರ್ಜರಿ) ಪಾಸ್‌ಪೋರ್ಟ್ ಮಾಡಿಸಿ ಕೊಡುತ್ತಿದ್ದ ಆರೋಪದ ಮೇಲೆ ವಸಂತನಗರದ ಸುಭಾಷ್ (37) ಎಂಬಾತನನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.
ವಕೀಲನಾಗಿರುವ ಸುಭಾಷ್, ತತ್ಕಾಲ್ ಅರ್ಜಿಗೆ ಐಎಫ್‌ಎಸ್ ಅಧಿಕಾರಿ ಶ್ರೀನಿವಾಸುಲು ಅವರ ಸಹಿಯನ್ನು ನಕಲು ಮಾಡಿ ಸುಮಾರು 28 ಮಂದಿಗೆ ಪಾಸ್‌ಪೋರ್ಟ್ ಮಾಡಿಸಿ ಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆತ, ಅದೇ ರೀತಿ ಇತ್ತೀಚೆಗೆ ವ್ಯಕ್ತಿಯೊಬ್ಬರ ತತ್ಕಾಲ್ ಅರ್ಜಿಗೆ ನಕಲು ಸಹಿ ಮಾಡಿದ್ದ. ಆದರೆ, ಶ್ರೀನಿವಾಸುಲು ಅವರು ಯಾವ `ಬ್ಯಾಚ್~ನ ಅಧಿಕಾರಿ ಎಂಬುದನ್ನು ಅರ್ಜಿಯಲ್ಲಿ ನಮೂದಿಸಿರಲಿಲ್ಲ. ಇದರಿಂದ ಅನುಮಾನಗೊಂಡ ಕೋರಮಂಗಲದ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯ ಅಧಿಕಾರಿಗಳು ಠಾಣೆಗೆ ದೂರು ನೀಡಿದ್ದರು.
ಈ ದೂರು ಆಧರಿಸಿ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ವಂಚನೆ ಪ್ರಕರಣ ಬೆಳಕಿಗೆ ಬಂತು ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಯು ಅಖಿಲ್ ಮತ್ತು ನದೀಮ್ ಎಂಬ ಮಧ್ಯವರ್ತಿಗಳ ನೆರವಿನಿಂದ ಈ ಕೃತ್ಯ ಎಸಗುತ್ತಿದ್ದ.
ಈ ವಂಚನೆ ಕೃತ್ಯದಿಂದ ಬಂದ ಹಣವನ್ನು ಈ ಮೂರೂ ಮಂದಿ ಹಂಚಿಕೊಳ್ಳುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.