ADVERTISEMENT

ಬಜೆಟ್‌ನಲ್ಲಿ ದಲಿತರಿಗೆ ಹೆಚ್ಚಿನ ಅನುದಾನಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2012, 19:35 IST
Last Updated 7 ಮಾರ್ಚ್ 2012, 19:35 IST

ಬೆಂಗಳೂರು: ದಲಿತರ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಒತ್ತಾಯಿಸಿ ಸಿಪಿಎಂ ಕಾರ್ಯಕರ್ತರು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬುಧವಾರ ಮೌನ ಪ್ರತಿಭಟನೆ ನಡೆಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಲಿತರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುತ್ತಿಲ್ಲ. ಇದರಿಂದ ದಲಿತರು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿಯುವಂತಾಗಿದೆ. ಅಲ್ಲದೇ ಬಜೆಟ್‌ನಲ್ಲಿ ಮೀಸಲಿಟ್ಟ ಅನುದಾನವನ್ನು ಅಧಿಕಾರಿಗಳು ದುರ್ಬಳಕೆ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಕೇಂದ್ರ ಸರ್ಕಾರವು 2011-12ರ ಬಜೆಟ್‌ನಲ್ಲಿ ದಲಿತ ಸಮುದಾಯಕ್ಕೆ 30,551 ಕೋಟಿ ರೂ. ಅನುದಾನ ನೀಡಿದೆ. ಆ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಲ್ಲ. ಪ್ರತಿ ಬಜೆಟ್‌ನಲ್ಲೂ ದಲಿತರಿಗೆ ಇದೇ ರೀತಿ ಅನ್ಯಾಯವಾಗುತ್ತಿದೆ. ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಮತ್ತು ಬುಡಕಟ್ಟು ಉಪ ಯೋಜನೆಗೆ (ಟಿಎಸ್‌ಪಿ) ಸರ್ಕಾರದಿಂದ ಬಿಡುಗಡೆಯಾದ ಅನುದಾನ ಖರ್ಚಾಗದೇ ಉಳಿತಾಯ ಆಗುತ್ತಿರುವುದು ದಲಿತ ವಿರೋಧಿ ನೀತಿಯಾಗಿದೆ ಎಂದರು.

ದಲಿತರ ಜನಸಂಖ್ಯೆಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಬೇಕು. ಅನುದಾನದ ಪರಿಣಾಮಕಾರಿ ಬಳಕೆಗೆ ಕೇಂದ್ರ ಶಾಸನ ರೂಪಿಸಬೇಕು. ದಲಿತರಿಗೆ ಅಂತ್ಯೋದಯ ಕಾರ್ಡ್‌ಗಳನ್ನು ನೀಡಬೇಕು. ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಬೇಕು. ದಲಿತ ವಿದ್ಯಾರ್ಥಿನಿಲಯಗಳ ಮೂಲ ಸೌಕರ್ಯ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.

ಸಿಪಿಎಂ ಬೆಂಗಳೂರು ಜಿಲ್ಲಾ ಸಮಿತಿ ಕಾರ್ಯದರ್ಶಿ ಮೀನಾಕ್ಷಿ ಸುಂದರಂ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಗೋಪಾಲಕೃಷ್ಣ ಅರಳಹಳ್ಳಿ, ಗೌರಮ್ಮ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.