ADVERTISEMENT

ಬಡವರಿಗಾದ ಅನ್ಯಾಯ ಸರಿಪಡಿಸಿ

ಕೈ ಉತ್ಪನ್ನಗಳಿಗೆ ಶೂನ್ಯ ತೆರಿಗೆ: ಪ್ರಧಾನಿಗೆ ಗ್ರಾಮ ಸೇವಾ ಸಂಘ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2017, 19:30 IST
Last Updated 17 ಅಕ್ಟೋಬರ್ 2017, 19:30 IST
ಬಡವರಿಗಾದ ಅನ್ಯಾಯ ಸರಿಪಡಿಸಿ
ಬಡವರಿಗಾದ ಅನ್ಯಾಯ ಸರಿಪಡಿಸಿ   

ಬೆಂಗಳೂರು: ‘ಕೈ ಉತ್ಪನ್ನಗಳಿಗೆ ಕರ ವಿಧಿಸಿದ್ದರಿಂದ ಬಡವರಿಗೆ ಆಗುತ್ತಿರುವ ಅನ್ಯಾಯವನ್ನು ಪ್ರಧಾನಿ ನರೇಂದ್ರ ಮೋದಿ ಸರಿಪಡಿಸಬೇಕು’ ಎಂದು ಗ್ರಾಮ ಸೇವಾ ಸಂಘದ ಮಾರ್ಗದರ್ಶಕ ಪ್ರಸನ್ನ ಒತ್ತಾಯಿಸಿದರು.

ಕೈ ಉತ್ಪನ್ನಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸುವುದನ್ನು ವಿರೋಧಿಸಿ ನಾಲ್ಕು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಅವರು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ಈ ಹಿಂದೆ ಬಡವರಿಗೆ ತೆರಿಗೆ ಇರಲಿಲ್ಲ. ಶ್ರೀಮಂತರಿಗೆ ಮಾತ್ರ ತೆರಿಗೆ ಇರುತ್ತಿತ್ತು. ಡಾ.ಬಿ.ಆರ್‌.ಅಂಬೇಡ್ಕರ್‌ ಪ್ರತಿಪಾದಿಸಿದ್ದ ಸಕಾರಾತ್ಮಕ ತಾರತಮ್ಯ ನೀತಿಯನ್ನು ತೆರಿಗೆ ವಿಚಾರದಲ್ಲಿ ಪಾಲಿಸಲಾಗುತ್ತಿತ್ತು. ಈ ಬಾರಿ ಎಲ್ಲರಿಗೂ ಒಂದೇ ರೀತಿಯ ತೆರಿಗೆ ವಿಧಿಸಲಾಗಿದೆ. ಜಿಎಸ್‌ಟಿ ಜಾರಿಯಾದ ಬಳಿಕ ಬಡವರ ಹೊಟ್ಟೆ ಮೇಲೆ ಹೊಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.ಈ ತಪ್ಪನ್ನು ಮುಂದುವರಿಸಿದರೆ ಮುಂದಿನ ಚುನಾವಣೆಯಲ್ಲಿ ಜನ ಪಾಠ ಕಲಿಸಲಿದ್ದಾರೆ’ ಎಂದು ಅವರು ಎಚ್ಚರಿಸಿದರು.

ADVERTISEMENT

‘ನವೆಂಬರ್‌ 5ರಂದು ಜಿಎಸ್‌ಟಿ ಮಂಡಳಿ ಸಭೆ ನಡೆಯಲಿದೆ. ಕೈ ಉತ್ಪನ್ನಗಳಿಗೆ ಶೂನ್ಯ ಕರ ವಿಧಿಸುವ ಕುರಿತು ಈ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು’ ಎಂದರು.

‘₹20 ಲಕ್ಷದಷ್ಟು ವಹಿವಾಟು ನಡೆಸುವ ತಯಾರಕರು ಹಾಗೂ ಸ್ವಸಹಾಯ ಸಂಘಗಳು ಜಿಎಸ್‌ಟಿ ವ್ಯಾಪ್ತಿಯಲ್ಲಿ ಬರು
ವುದಿಲ್ಲ. ಕೈ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಹಾಗೂ ಸ್ವಸಹಾಯ ಸಂಘಗಳಿಗೆ ಈ ಮಿತಿಯನ್ನು ₹50 ಲಕ್ಷಕ್ಕೆ ಹೆಚ್ಚಿಸಬೇಕು’ ಎಂದು ಮನವಿ ಮಾಡಿದರು.

ಕೈ ಉತ್ಪನ್ನ– ಸಮಿತಿ ವ್ಯಾಖ್ಯಾನ: ‘ಕೈ ಉತ್ಪನ್ನಗಳು ಯಾವುವು ಎಂಬ ವಿಚಾರದಲ್ಲಿ ಅನೇಕ ಗೊಂದಲಗಳಿದ್ದವು. ಪ್ರೊ.ಆಶಿಸ್‌ ನಂದಿ ನೇತೃತ್ವದ ಸಮಿತಿ ಈ ಬಗ್ಗೆ ಸ್ಪಷ್ಟ ವ್ಯಾಖ್ಯಾನ ಮಾಡಿದೆ’ ಎಂದು ಪ್ರಸನ್ನ ತಿಳಿಸಿದರು.

‘ವ್ಯವಸಾಯ ಉತ್ಪನ್ನ, ಅರಣ್ಯ ಉತ್ಪನ್ನ, ಕೈಮಗ್ಗ, ಕರಕುಶಲ ಉತ್ಪನ್ನಗಳು ಸೇರಿ ಒಟ್ಟು 200ಕ್ಕೂ ಹೆಚ್ಚು ಉತ್ಪನ್ನಗಳನ್ನು ಸಮಿತಿ ಪಟ್ಟಿ ಮಾಡಿದೆ. ಕೈಯಿಂದ ನಡೆಸುವ ಕೃಷಿ, ಕಟ್ಟಡ ನಿರ್ಮಾಣದಂತಹ ಸೇವೆಗಳನ್ನೂ ಇದರ ವ್ಯಾಪ್ತಿಯಲ್ಲಿ ಗುರುತಿಸಿದೆ’ ಎಂದು ವಿವರಿಸಿದರು.

ಸಿದ್ಧಗಂಗಾಮಠ ಬೆಂಬಲ
ತುಮಕೂರು: ಕೈ ಉತ್ಪನ್ನಗಳ ಮೇಲೆ ಶೂನ್ಯ ಕರ ವಿಧಿಸಬೇಕು ಹಾಗೂ ಸರಕು ಮತ್ತು ಸೇವಾ ತೆರಿಗೆಯಿಂದ (ಜಿ.ಎಸ್.ಟಿ)  ವಿನಾಯಿತಿ ನೀಡುವಂತೆ ಒತ್ತಾಯಿಸಿ ಹಿರಿಯ ರಂಗಕರ್ಮಿ ಪ್ರಸನ್ನ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಚಳವಳಿಗೆ ಸಿದ್ಧಗಂಗಾಮಠ ಬೆಂಬಲ ವ್ಯಕ್ತಪಡಿಸಿದೆ.

ರೈತರು ಮತ್ತು ಎಲ್ಲ ಗ್ರಾಮೀಣ ಕುಶಲಕರ್ಮಿಗಳ ಉತ್ಪನ್ನಗಳಿಗೆ ತೆರಿಗೆ ಹೊರೆ ಇರಬಾರದು ಎಂದು ಆಗ್ರಹಿಸಿ ಪ್ರಸನ್ನ ಅವರು ನಡೆಸುತ್ತಿರುವ ಹೋರಾಟವು ಯಶಸ್ವಿಯಾಗಲಿ ಎಂದು ಸಿದ್ಧಗಂಗಾಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.