ADVERTISEMENT

ಬಡವರಿಗೆ ಸಿಗದ ಹಕ್ಕು ಪತ್ರ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2011, 19:55 IST
Last Updated 11 ಸೆಪ್ಟೆಂಬರ್ 2011, 19:55 IST

ರಾಜರಾಜೇಶ್ವರಿನಗರ:  ಎಲ್ಲ ಬಡವರಿಗೆ ಮೂರು ತಿಂಗಳ ಒಳಗಾಗಿ ಹಕ್ಕುಪತ್ರ ನೀಡುವಂತೆ ಸರ್ಕಾರದ ಆದೇಶವಿದ್ದರೂ ಕಂದಾಯ ಅಧಿಕಾರಿಗಳ ಆಸಡ್ಡೆಯಿಂದ ಬಡವರಿಗೆ ಹಕ್ಕು ಪತ್ರ ಸಿಗುತ್ತಿಲ್ಲ ಎಂದು ಶಾಸಕ ಎಂ.ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು.

 ಬಿಬಿಎಂಪಿ ವಲಯ ಕಚೇರಿಯಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಯೋಜನೆ, ಕಂದಾಯ, ತೋಟಗಾರಿಕೆ ಇಲಾಖೆಯಲ್ಲಿ ಕೆಲವು ತಪ್ಪುಗಳು ಕಂಡು ಬಂದಿದ್ದು ಸರಿಪಡಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ ಎಂದರು.

ಸಾರ್ವಜನಿಕ ಸೇವೆ ಮಾಡದ ಅಧಿಕಾರಿಗಳು ಮತ್ತು ಮೂರು ವರ್ಷಗಳಿಂದ ತಳವೂರಿರುವ ಎಲ್ಲ ಅಧಿಕಾರಿಗಳು ವರ್ಗಾವಣೆ ಮಾಡಿಸಿಕೊಂಡು ಹೋಗುವಂತೆ ಸೂಚಿಸಿದರು.

 ಕೆಲವು ಉದ್ಯಾನಗಳ ಕಾಮಗಾರಿ ಮುಗಿದಿದ್ದರೂ ವಿಶೇಷ ಅನುದಾನ ಬಿಡುಗಡೆಯಾಗುತ್ತಿರುವ ಬಗ್ಗೆ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಪ್ರಗತಿ ಪರಿಶೀಲನೆಗೆ ಬಾರದ ಅಧಿಕಾರಿಗಳು ಜನರ ಸೇವೆ ಮಾಡಲು ಹೇಗೆ ಸಾಧ್ಯ? ಇಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

 ಕಾರ್ಯನಿರ್ವಾಹಕ ಎಂಜಿನಿಯರ್ ಕೀರನಾಯಕ್ ಮಾತನಾಡಿ, 23 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಪ್ರಗತಿಯಲಿದ್ದು 483 ಲಕ್ಷದ ಕಾಮಗಾರಿಯನ್ನು 30 ದಿನ ಒಳಗೆ ಮುಗಿಸಲಾಗುವುದು ಎಂದರು. ಪಾಲಿಕೆ ಸದಸ್ಯ ಮುನಿರತ್ನ ಮಾತನಾಡಿ, ಕಸ ವಿಲೇವಾರಿಯಲ್ಲಿ ಬಾರಿ ಅವ್ಯವಹಾರ ನಡೆದಿದ್ದು, ಆಯುಕ್ತ ಸಿದ್ದಯ್ಯ ಗುತ್ತಿಗೆದಾರರ ಕೈಗೊಂಬೆಯಾಗಿದ್ದಾರೆ ಎಂದು ದೂರಿದರು.

 ಜಂಟಿ ಆಯುಕ್ತ ಕೆ.ಎಂ.ರಾಮಚಂದ್ರನ್, ಉಪ ಆಯುಕ್ತ ವೆಂಕಟೇಶ್, ಮುಖ್ಯ ಎಂಜಿನಿಯರ್ ಶ್ರೀನಿವಾಸ್, ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಬಿ.ಆರ್.ಮುದ್ದುರಾಜು, ಪಾಲಿಕೆ ಸದಸ್ಯರಾದ ವೆಂಕಟೇಶ್‌ಬಾಬು, ತಿಮ್ಮರಾಜು, ಲಕ್ಷ್ಮಿಕಾಂತರೆಡ್ಡಿ, ಆಶ್ರಯ ಸಮಿತಿ ಸದಸ್ಯೆ ರಶ್ಮಿ ಡಿಸೋಜ, ನಗರಸಭೆ ಮಾಜಿ ಉಪಾಧ್ಯಕ್ಷ ಮುನಿವೆಂಕಟಪ್ಪ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.