ಬೆಂಗಳೂರು: ನಾರಾಯಣ ನೇತ್ರಾಲಯವು ಅಶೋಕನಗರದಲ್ಲಿ ತನ್ನ ಮೂರನೇ ಬೃಹತ್ ಚಿಕಿತ್ಸಾಲಯವನ್ನು ಬುಧವಾರ ಪ್ರಾರಂಭಿಸಿತು. ಈ ಸಂದರ್ಭದಲ್ಲಿ ಕಣ್ಣಿನ ಕ್ಯಾನ್ಸರ್‌ನಿಂದ ಬಳಲುವ ಬಡ ಮಕ್ಕಳಿಗೆ ಸಂಪೂರ್ಣ ಉಚಿತ ನೇತ್ರ ಚಿಕಿತ್ಸೆ ನೀಡುವುದಾಗಿ ಘೋಷಿಸಲಾಯಿತು.
ನಾರಾಯಣ ನೇತ್ರಾಲಯದಿಂದ ಚಿಕಿತ್ಸೆ ಪಡೆದು ದೃಷ್ಟಿ ಪಡೆದುಕೊಂಡ ಮಕ್ಕಳಾದ ಹೆಲೆನ್, ಮೊಹಿದ್ದೀನ್ ಮತ್ತು ರಕ್ಷಿತಾ ರಿಬ್ಬನ್ ಕತ್ತರಿಸುವ ಮೂಲಕ ಚಿಕಿತ್ಸಾಲಯವನ್ನು ಉದ್ಘಾಟಿಸಿದರು.
ನಂತರ ಮಾತನಾಡಿದ ನೇತ್ರಾಲಯದ ಅಧ್ಯಕ್ಷ ಡಾ.ಕೆ.ಭುಜಂಗ ಶೆಟ್ಟಿ, `ಬಡತನದ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಿಂದ ಬಂದ ಮಕ್ಕಳಿಗೆ ಹಣಕಾಸಿನ ಕಾರಣಕ್ಕೆ ಚಿಕಿತ್ಸೆ ನಿರಾಕರಿಸಬಾರದು ಎನ್ನುವುದು ನನ್ನ ಆಶಯ~ ಎಂದು ಅವರು ನುಡಿದರು.
`ರೆಟಿನೋಬ್ಲಾಸ್ಟೊಮ ಎಂಬುದು ಮಕ್ಕಳನ್ನು ಕಾಡುವ ಕಣ್ಣಿನ ಕ್ಯಾನ್ಸರ್. ಇದು ಉಂಟಾಗುವುದು ರೆಟಿನೋಬಾಸ್ಟೊಮ ಎಂಬ ವಂಶವಾಹಿಯ ತೀವ್ರ ಬೆಳವಣಿಗೆಯಿಂದ. ಇದಕ್ಕೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡದಿದ್ದಲ್ಲಿ ಗಂಭೀರ ಪರಿಣಾಮಕ್ಕೆ ಎಡೆ ಮಾಡಿಕೊಡುತ್ತದೆ. ಮಕ್ಕಳಲ್ಲಿ ಕಾಡುವ ಮೂರನೇ ಅತಿದೊಡ್ಡ ಕ್ಯಾನ್ಸರ್ ಆಗಿದೆ~ ಎಂದು ಅವರು ಹೇಳಿದರು.
`ನೇತ್ರ ಕ್ಯಾನ್ಸರ್‌ನ ಚಿಕಿತ್ಸೆಯ ಅವಧಿ 2ರಿಂದ 4 ವರ್ಷ. ಚಿಕಿತ್ಸಾ ವೆಚ್ಚ ರೂ. 2 ಲಕ್ಷಕ್ಕೂ ಹೆಚ್ಚು. ಬಡ ಮಕ್ಕಳಿಗೆ ನೂರಕ್ಕೆ ನೂರರಷ್ಟು ಉಚಿತವಾಗಿ ಚಿಕಿತ್ಸೆಯನ್ನು ಕೊಡಲಾಗುವುದು~ ಎಂದು ಅವರು ವಾಗ್ದಾನ ನೀಡಿದರು.
ಪ್ರಾರಂಭಿಕ ಹಂತದಲ್ಲೇ ಸೂಕ್ತ ಚಿಕಿತ್ಸೆ ಪಡೆದು ದೃಷ್ಟಿ ಪಡೆದುಕೊಂಡ ಹೇಮಂತ್ (8 ವರ್ಷ), ಎಸ್.ಬಿ.ನವೀನ್ (20), ನಾರಾಯಣಪ್ಪ (65) ಮೊದಲಾದವರು ಉಪಸ್ಥಿತರಿದ್ದರು. ಇವೆರೆಲ್ಲರಿಗೂ ನಾರಾಯಣ ನೇತ್ರಾಲಯದಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.