ADVERTISEMENT

ಬನ್ನೇರುಘಟ್ಟ ಉದ್ಯಾನ ಅಭಿವೃದ್ಧಿಗೆ ರೂ 50 ಕೋಟಿ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 19:30 IST
Last Updated 19 ಫೆಬ್ರುವರಿ 2012, 19:30 IST

ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಮೂಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಅಂದಾಜು 50 ಕೋಟಿ ರೂ. ವೆಚ್ಚದ ಯೋಜನೆ ಸಿದ್ಧಪಡಿಸಲಾಗಿದೆ ಎಂದು ಅರಣ್ಯ ಖಾತೆ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಭಾನುವಾರ ಪ್ರಾಣಿ ದತ್ತು ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಸೌಲಭ್ಯಗಳನ್ನು ಕಲ್ಪಿಸಿಕೊಡಲು ಸರ್ಕಾರದ ಜೊತೆಗೆ ಸಾರ್ವಜನಿಕರ ಸಹಭಾಗಿತ್ವ ಪಡೆಯಲಾಗುವುದು. ಉದ್ಯಮಿಗಳ ನೆರವು ಪಡೆಯಲು ಸಹ ಪ್ರಯತ್ನ ನಡೆಸಲಾಗಿದೆ. ಈ ದಿಸೆಯಲ್ಲಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಯೋಜನೆಗೆ ನೆರವು ನೀಡಲು ಮುಂದಾಗಿದ್ದಾರೆ. ಹುಲಿ ಧಾಮ, ಕರಡಿ ಧಾಮ, ಸಿಂಹ ಧಾಮಗಳನ್ನು ಅಭಿವೃದ್ಧಿಪಡಿಸಿ ನೆರವು ನೀಡಿದ ದಾನಿಗಳ ಹೆಸರನ್ನು ಆಯಾಯ ಆವರಣಗಳಿಗೆ ನಾಮಕರಣ ಮಾಡಲು ಚಿಂತನೆ ಮಾಡಲಾಗಿದೆ ಎಂದರು.

ADVERTISEMENT

ಬನ್ನೇರುಘಟ್ಟ ಜೈವಿಕ ಉದ್ಯಾನವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಿ ಅಭಿವೃದ್ಧಿಪಡಿಸಲು ದೂರದೃಷ್ಟಿಯ ಯೋಜನೆ ರೂಪಿಸಲಾಗಿದೆ. ಅರಣ್ಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 3 ಸಾವಿರ ಅರೆಕಾಲಿಕ ಸಿಬ್ಬಂದಿಯನ್ನು ಕಾಯಂಗೊಳಿಸಲು ಸರ್ಕಾರದಲ್ಲಿ ಚರ್ಚಿಸಲಾಗುವುದು. ಕಾಯಂಗೆ ಮೊದಲು ಅವರಿಗೆ ಸೌಲಭ್ಯಗಳನ್ನು ನೀಡಲು ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುವುದು ಎಂದರು.

ಸಂಸದ ರಾಜೀವ್ ಚಂದ್ರಶೇಖರ್, ಉದ್ಯಾನದ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಆರ್.ರಾಜು, ವಲಯ ಅರಣ್ಯಾಧಿಕಾರಿ ಮುದ್ದಣ್ಣ, ವೈದ್ಯ ಡಾ. ಚೆಟ್ಟಿಯಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

31 ಪ್ರಾಣಿ ದತ್ತು ಪಡೆದ ರಾಜೀವ್

ಆನೇಕಲ್: ಉದ್ಯಾನದ ಪ್ರಾಣಿ ಮತ್ತು ಪಕ್ಷಿಗಳನ್ನು ದತ್ತು ಪಡೆಯುವ ಮೂಲಕ ವನ್ಯಜೀವಿಗಳ ಸಂರಕ್ಷಣೆಗೆ ಕೊಡುಗೆ ನೀಡುವುದು ಎಲ್ಲರ ಜವಾಬ್ದಾರಿ ಎಂದು ಸಂಸದ ರಾಜೀವ್ ಚಂದ್ರಶೇಖರ್ ಹೇಳಿದರು.

ತಾಲ್ಲೂಕಿನ ಬನ್ನೇರುಘಟ್ಟ ಜೈವಿಕ ಉದ್ಯಾನಲ್ಲಿ ಕುಟುಂಬ ಸದಸ್ಯರ ಹೆಸರಿನಲ್ಲಿ 31 ಪ್ರಾಣಿಗಳನ್ನು ದತ್ತು ಪಡೆದ ನಂತರ ಮಾತನಾಡಿದ ಅವರು, ಉದ್ಯಾನದಲ್ಲಿನ ಎಲ್ಲ ಪ್ರಾಣಿಗಳಿಗೆ ನೆರವಿನ ಅವಶ್ಯಕತೆಯಿದೆ. `ನಮ್ಮ ಬೆಂಗಳೂರು ಪ್ರತಿಷ್ಠಾನ~ವು ಬೆಂಗಳೂರಿನ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ವನ್ಯಜೀವಿಗಳ ದತ್ತು ಪಡೆಯುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ರೂಪಿಸಲಿದೆ ಎಂದು ಅವರು ಹೇಳಿದರು.

ಉದ್ಯಾನದ ಕಾರ್ಯ ನಿರ್ವಾಹಕ ನಿರ್ದೇಶಕ ಡಾ. ಆರ್.ರಾಜು ಮಾತನಾಡಿ, ದತ್ತು ಕಾರ್ಯಕ್ರಮದ ಮೂಲಕ ಇದುವರೆಗೆ 70 ಲಕ್ಷ ರೂಪಾಯಿ ಸಂಗ್ರಹವಾಗಿದೆ ಎಂದರು.

ರಾಜೀವ್ ಚಂದ್ರಶೇಖರ್ 6.89 ಲಕ್ಷ ರೂಪಾಯಿಯ ಚೆಕ್ ಅನ್ನು ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಹಸ್ತಾಂತರಿಸುವ ಮೂಲಕ ದತ್ತು ಪ್ರಕ್ರಿಯೆ ಪೂರ್ಣಗೊಳಿಸಿದರು. ಮಕ್ಕಳ ಹೆಸರಿನಲ್ಲಿ ಜೀಬ್ರಾ, ಚಿರತೆ, ಹಿಪ್ಪೊಪೊಟಾಮಸ್, ಕರಡಿ, ಕೋಬ್ರಾ ಜೊತೆಗೆ ಹಲವು ಪಕ್ಷಿಗಳನ್ನು ಅವರು ದತ್ತು ಪಡೆದಿದ್ದಾರೆ. ರಾಜೀವ್ ಚಂದ್ರಶೇಖರ್ ದಂಪತಿ ಲವ್‌ಬರ್ಡ್ಸ್, ಸಿಂಹ, ಆನೆ, ರಾಯಲ್ ಬೆಂಗಾಲ್ ಬಿಳಿಹುಲಿ ಸೇರಿದಂತೆ ಆರು ಪ್ರಾಣಿಗಳನ್ನು ದತ್ತು ಪಡೆದುಕೊಂಡಿದ್ದಾರೆ.

ಹಾರ್ನ್‌ಬಿಲ್ ಪಕ್ಷಿಯ ಆವರಣವನ್ನು ಈ ಸಂದರ್ಭದಲ್ಲಿ ಸಚಿವ ಯೋಗೇಶ್ವರ್ ಹಾಗೂ ರಾಜೀವ್ ಚಂದ್ರಶೇಖರ್ ಅನಾವರಣಗೊಳಿಸಿದರು. ಕುಟುಂಬ ಸಮೇತ ಉದ್ಯಾನಕ್ಕೆ ಆಗಮಿಸಿದ್ದ ಸಚಿವರು ಹಾಗೂ ರಾಜ್ಯಸಭಾ ಸದಸ್ಯರು ಸಫಾರಿ ವೀಕ್ಷಿಸಿ ಸಂತಸಪಟ್ಟರು.

ಉದ್ಯಾನದಲ್ಲಿನ ಆನೆಗಳಾದ ವೇದ ಮತ್ತು ವನಿತಾಗೆ ಜನಿಸಿದ್ದ ಎರಡು ಮರಿಗಳಿಗೆ ನಾಮಕರಣ ಸಹ ಮಾಡಿದರು. ಸಚಿವರು `ದ್ರೋಣಾಚಾರ್ಯ~ ಎಂದು ಒಂದು ಮರಿಗೆ, ರಾಜ್ಯಸಭಾ ಸದಸ್ಯರು `ಮೀನಾ~ ಎಂದು ಮತ್ತೊಂದು ಮರಿಗೆ ನಾಮಕರಣ ಮಾಡಿದರು.

ಅಕ್ರಮ: ಇಲಾಖಾ ತನಿಖೆ ಆರಂಭ

ಆನೇಕಲ್: `ಅಕ್ರಮ ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದ್ದು, ಗಣಿಗಾರಿಕೆಯನ್ನು ತಡೆಯಲು ಇಲಾಖಾ ತನಿಖೆ ಪ್ರಾರಂಭಿಸಲಾಗಿದೆ. 15 ದಿನಗಳಲ್ಲಿ ತನಿಖಾ ವರದಿ ಕೈಸೇರಲಿದೆ. ವರದಿಯನ್ನಾಧರಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು~ ಎಂದು ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ತಾಲ್ಲೂಕಿನ ಬನ್ನೇರುಘಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಇಲಾಖೆಯ ತನಿಖೆ, ಇದರಲ್ಲಿ ವೈಯಕ್ತಿಕ ಹಿತಾಸಕ್ತಿಗಳಿಲ್ಲ. ಅಕ್ರಮ ಗಣಿಗಾರಿಕೆ ತಡೆಯುವುದು ಅರಣ್ಯ ಸಚಿವನಾಗಿ ನನ್ನ ಜವಾಬ್ದಾರಿಯಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.