ADVERTISEMENT

ಬನ್ನೇರುಘಟ್ಟ: ಹೆಣ್ಣು ಹುಲಿ ಮರಿ ಸಾವು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 19:54 IST
Last Updated 21 ಏಪ್ರಿಲ್ 2013, 19:54 IST

ಬೆಂಗಳೂರು: ಹುಟ್ಟಿನಿಂದ ನರರೋಗದಿಂದ ಬಳಲುತ್ತಿದ್ದ ಒಂದು ವರ್ಷದ ಝೂಬಿ ಎಂಬ ಹೆಣ್ಣು ಹುಲಿ ಮರಿಯೊಂದು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಭಾನುವಾರ ಸಾವನ್ನಪ್ಪಿದೆ.

`15 ವರ್ಷಕ್ಕಿಂತ ಹೆಚ್ಚಿನ ವಯೋಮಾನದ ಟಿಪ್ಪು ಮತ್ತು ರೂಪಾ ಎಂಬ ಹುಲಿ ಜೋಡಿಗೆ ಜನಿಸಿದ ಝೂಬಿ, ಮಧ್ಯಾಹ್ನದವರೆಗೂ ಲವಲವಿಕೆಯಿಂದ ಆಟವಾಡುತ್ತಿತ್ತು. ಒಂದು ಗಂಟೆ ಸುಮಾರಿಗೆ ಅರ್ಧ ಕೆ.ಜಿ ಚಿಕನ್ ನೀಡಲಾಯಿತು.

ಅದನ್ನು ಸೇವಿಸಿದ ನಂತರ ಝೂಬಿ ವಾಂತಿ ಮಾಡಲಾರಂಭಿಸಿತು. ಬಳಿಕ ಅಸ್ವಸ್ಥಗೊಂಡ ಮರಿ, ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿತು. ಅದರ ಒಳಾಂಗಗಳನ್ನು `ಜಾನುವಾರು ಆರೋಗ್ಯ ಮತ್ತು ಪಶುಸಂಗೋಪನಾ ಜೀವ ವಿಜ್ಞಾನ ಸಂಸ್ಥೆ'ಗೆ ಕಳುಹಿಸಲಾಗಿದೆ. ತಜ್ಞರು ಪರಿಶೀಲನೆ ನಡೆಸಿ ವರದಿ ನೀಡಿದ ನಂತರ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ' ಎಂದು ವನ್ಯಜೀವಿ ತಜ್ಞರು ತಿಳಿಸಿದರು. .

`ಟಿಪ್ಪು ಮತ್ತು ರೂಪಾ ಹುಲಿಗಳಿಗೆ ಮೂರು ಮರಿಗಳು ಜನಿಸಿದ್ದವು. ಆ ಹುಲಿಗಳಿಗೆ ಹೆಚ್ಚಿನ ವಯೋಮಾನವಾಗಿದ್ದರಿಂದ, ಜನಿಸಿದ ಮರಿಗಳು ನರರೋಗದಿಂದ ಬಳಲುತ್ತಿದ್ದವು. ಒಂದು ಮರಿ ಹುಟ್ಟಿದಾಗಲೇ ಸಾವನ್ನಪ್ಪಿದರೆ, ಝೂಬಿ ಇಂದು ಮಧ್ಯಾಹ್ನ ಕೊನೆಯುಸಿರೆಳಿಯಿತು. ಮತ್ತೊಂದು ಮರಿ `ಗೋಲ್ಡ್' ಕೂಡ ನರರೋಗದ ಸಮಸ್ಯೆಯಿಂದ ಬಳಲುತ್ತಿದೆ' ಎಂದು ಉದ್ಯಾನದ ಕಾರ್ಯನಿರ್ವಾಹಕ ಎಂಜಿನಿಯರ್ ಎನ್.ದೇವರಾಜ್ ಹೇಳಿದರು.

`ಹೆಚ್ಚಿನ ವಯೋಮಾನದ ಹುಲಿಗಳು ಮರಿಗಳಿಗೆ ಜನನ ನೀಡಿದರೆ, ಅವುಗಳಿಗೆ ಅನಾರೋಗ್ಯದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ಕಾರಣಕ್ಕಾಗಿ ಹೆಚ್ಚಿನ ವಯೋಮಾನದ ಹುಲಿಗಳನ್ನು ಲೈಂಗಿಕ ಕ್ರಿಯೆಯಲ್ಲಿ ಭಾಗಿಯಾಗದಂತೆ ಪ್ರತ್ಯೇಕ ಬೋನ್‌ನಲ್ಲಿರಿಸಲಾಗುತ್ತದೆ. ಆದರೆ, ಆ ಹುಲಿಗಳು ಸಫಾರಿಗೆ ಬಿಟ್ಟ ಸಂದರ್ಭದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುತ್ತವೆ. ಅದೇ ರೀತಿ ಟಿಪ್ಪು ಮತ್ತು ರೂಪಾ ಹುಲಿ ಜೋಡಿಗಳು ಲೈಂಗಿಕಕ್ರಿಯೆಯಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ' ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹೆಚ್ಚಿನ ವಯೋಮಾನದ ಹುಲಿಗಳು ಮರಿಗಳಿಗೆ ಹಾಲುಣಿಸಲು ನಿರಾಕರಿಸುತ್ತವೆ. ಇದರಿಂದಾಗ ಮರಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಹೆಚ್ಚಿನ ವಯೋಮಾನದ ಹೆಣ್ಣು ಹುಲಿಗಳಾದ ರೂಪಾ, ಯಶೋದಾ ಮತ್ತು ಗೌರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಉದ್ಯಾನದ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.