ಬೆಂಗಳೂರು: ಕರ್ನಾಟಕ ಹಾಲು ಮಹಾಮಂಡಲವು ನ್ಯೂಜಿಲೆಂಡ್‌ನ ಫಂಟೆರಾ ಮಿಲ್ಕ್ ಗ್ರೂಪ್‌ನ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಚೀಜ್ ಉತ್ಪಾದನಾ (ಹಾಲಿನ ವಿವಿಧ ಉತ್ಪನ್ನಗಳ) ಘಟಕ ಸ್ಥಾಪಿಸಲು ಮುಂದಾಗಿದೆ.
‘ಈ ಸಂಬಂಧ ಈಗಾಗಲೇ ಫಂಟೆರಾ ಮಿಲ್ಕ್ ಗ್ರೂಪ್‌ನೊಂದಿಗೆ ಚರ್ಚೆ ನಡೆಸಲಾಗಿದೆ. ಸುಮಾರು 80 ಕೋಟಿ ರೂಪಾಯಿ ವೆಚ್ಚದಲ್ಲಿ 10 ಎಕರೆ ಪ್ರದೇಶದಲ್ಲಿ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಉದ್ದೇಶಕ್ಕಾಗಿ ಕೆಎಂಎಫ್ 40 ಕೋಟಿ ರೂಪಾಯಿ ಖರ್ಚು ಮಾಡಲಿದೆ’ ಎಂದು ಕೆಎಂಎಫ್ ಅಧ್ಯಕ್ಷ ಜಿ. ಸೋಮಶೇಖರರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಕೆಎಂಎಫ್ ಘಟಕ ಸ್ಥಾಪನೆಗಾಗಿ ಹಾಲು ಹಾಗೂ ಇತರ ಮೂಲಭೂತ ಸೌಕರ್ಯಗಳನ್ನು ಒದಗಿಸಲಿದೆ. ಫಂಟೆರಾ ತಾಂತ್ರಿಕ ಸಹಾಯ ನೀಡಿ ಹಾಲಿನ ವಿವಿಧ ಉತ್ಪನ್ನಗಳನ್ನು ಉತ್ಪಾದಿಸಲಿದೆ. ಈ ಉತ್ಪನ್ನಗಳನ್ನು ವಿಶ್ವದಾದ್ಯಂತ ಮಾರಾಟ ಮಾಡಲಾಗುವುದು. ಚೀಜ್‌ಗೆ ವಿಶ್ವ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ಯೋಜನೆ ಸಫಲಗೊಳ್ಳಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಹಾಲು ಉತ್ಪಾದನೆ ಹೆಚ್ಚಳ, ವಿವಿಧ ಉತ್ಪನ್ನಗಳ ತಯಾರಿಕೆ ಕುರಿತು ಅಧ್ಯಯನ ನಡೆಸುವುದಕ್ಕಾಗಿ ನಾನು ಕೆಎಂಎಫ್‌ನ 11 ಮಂದಿ ನಿರ್ದೇಶಕರು, ವ್ಯವಸ್ಥಾಪಕ ನಿರ್ದೇಶಕರೂ ಸೇರಿದಂತೆ 25 ಮಂದಿಯೊಂದಿಗೆ ಏಳು ದಿನಗಳ ನ್ಯೂಜಿಲೆಂಡ್ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಫಂಟೆರಾ ಮಿಲ್ಕ್ ಗ್ರೂಪ್‌ಗೆ ಭೇಟಿ ನೀಡಲಾಗಿತ್ತು. ಫಂಟೆರಾ ಗ್ರೂಪ್‌ಗೆ 10650 ರೈತರು ಷೇರುದಾರರಾಗಿದ್ದಾರೆ. ಇದು ಸುಮಾರು 85 ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಈ ಉತ್ಪನ್ನಗಳಿಗೆ ವಿಶ್ವದಾದ್ಯಂತ ಬೇಡಿಕೆ ಇದೆ’ ಎಂದು ಅವರು ತಿಳಿಸಿದ್ದಾರೆ.
‘ಇಂಗ್ಲೆಂಡ್‌ನ ಒಬ್ಬ ಪ್ರಜೆ 1964ರಲ್ಲಿ ನ್ಯೂಜಿಲೆಂಡ್‌ಗೆ ಆಗಮಿಸಿ ಹೈನುಗಾರಿಕೆ ಪ್ರಾರಂಭಿಸಿದ್ದಾನೆ. ಈತನ 1000 ಹಸುಗಳನ್ನು ಐವರು ಪಾಲನೆ ಮಾಡುತ್ತಿದ್ದಾರೆ. ಇವುಗಳಿಂದ 50 ಸಾವಿರ ಲೀ. ಹಾಲನ್ನು ಉತ್ಪಾದಿಸಲಾಗುತ್ತಿದೆ. ಯಂತ್ರ-ದ ಮೂಲಕ 8 ನಿಮಿಷಗಳಲ್ಲಿ 60 ಹಸುಗಳ ಹಾಲನ್ನು ಕರೆಯಲಾಗುತ್ತಿದೆ.
ಬಲ್ಕ್ ಕೂಲರ್ ಮೂಲಕ ಶೀಥಲೀಕರಣ ಮಾಡಲಾಗುತ್ತಿದೆ. 900 ಎಕರೆ ನಿವೇಶನದ ಹುಲ್ಲುಗಾವಲಿನಲ್ಲಿ ಯಾವುದೇ ಶೆಡ್ಡುಗಳನ್ನು ನಿರ್ಮಿಸದೆ ಬಯಲಿನಲ್ಲೇ ಈ ಹಸುಗಳು ಮೇವನ್ನು ತಿಂದು ಅಲ್ಲಲ್ಲಿ ನಿರ್ಮಿಸಿದ ತೊಟ್ಟಿಯಲ್ಲಿ ನೀರು ಕುಡಿಯುತ್ತವೆ. ಈ ವ್ಯಕ್ತಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡಿದ್ದು, ಹೈನುಗಾರಿಕೆಗೆ ಮಾದರಿಯಾಗಿದ್ದಾರೆ’ ಎಂದು ಹೇಳಿದ್ದಾರೆ.
ಕೆಎಂಎಫ್ ಪ್ರತಿ ದಿನ 50 ಲಕ್ಷ ಲೀಟರ್ ಹಾಲು ಉತ್ಪಾದಿಸುವ ಗುರಿ ಹೊಂದಿದೆ. ಪ್ರಸ್ತುತ ಕೆಎಂಎಫ್ 38.40 ಲಕ್ಷ ಲೀಟರ್ ಹಾಲನ್ನು ಉತ್ಪಾದಿಸುತ್ತಿದೆ. ಉತ್ಪಾದನೆಯಲ್ಲಿ ಶೇ 12ರಷ್ಟು ಹೆಚ್ಚಳವಾಗಿದೆ. 2009-10ರಲ್ಲಿ 4200 ಕೋಟಿ ರೂಪಾಯಿ ವಹಿವಾಟು ನಡೆಸಿರುವ ಸಂಸ್ಥೆ, 14 ಕೋಟಿ ರೂಪಾಯಿ ಲಾಭ ಗಳಿಸಿದ್ದರೆ, 2010-11ರಲ್ಲಿ 5080 ಕೋಟಿ ರೂಪಾಯಿ ವಹಿವಾಟು ನಡೆಸಿ 30 ಕೋಟಿ ರೂಪಾಯಿ ಲಾಭ ಗಳಿಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.