ADVERTISEMENT

ಬರೀ ಮಾತು ಬಂಡಾಯ ಅಲ್ಲ: ಅನಂತಮೂರ್ತಿ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2013, 19:59 IST
Last Updated 15 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ‘ಕ್ರಾಂತಿಕಾರಕ ಭಾಷಣ ಮಾಡಿಯೂ ಸರ್ಕಾರದ ಪರ ಇರಲು ಸಾಧ್ಯ. ಆದ್ದರಿಂದಲೇ ಬಂಡಾಯ ಚಳವಳಿ ಮೇಲೆ ನನ್ನದು ಮೊದಲಿನಿಂದಲೂ ವಿಶ್ಲೇಷಣೆ ಕಣ್ಣು’ ಎಂದು ಹಿರಿಯ ಸಾಹಿತಿ ಯು.ಆರ್‌. ಅನಂತಮೂರ್ತಿ ಹೇಳಿದರು.

ಅಂಕಿತ ಪುಸ್ತಕ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ‘ಅನುಸಂಧಾನ’ ಮತ್ತು ‘ದೇವರ ಕಣ್ಣು’ ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ‘ಕ್ರಾಂತಿಕಾರಕ ಮಾತುಗಳಿಗೆ ಸರ್ಕಾರದಲ್ಲಿ ಬೆಲೆ ಸಿಗುವಂತಾಗಬೇಕು. ಆಗಲೇ ಅದು ಸಾರ್ಥಕ ಬಂಡಾಯ’ ಎಂದು ವಿಶ್ಲೇಷಿಸಿದರು.

‘ನಾವು ರಚನೆ ಮಾಡಿದ್ದೂ ಒಂದರ್ಥದಲ್ಲಿ ಬಂಡಾಯ ಸಾಹಿತ್ಯವನ್ನೇ. ಹಾಗಿರುವಾಗ ಇದೇನು ಬಂಡಾಯ ಎಂಬ ಉಪೇಕ್ಷೆ ಇತ್ತು. ಬರವಣಿಗೆ ಯಲ್ಲಿ ಮಗ್ನನಾಗಿದ್ದಾಗ ಬೇರೆಯವರ ಸಾಹಿತ್ಯ ಕೃಷಿಯನ್ನು ಸರಿಯಾಗಿ ಗಮನಿಸಲಿಲ್ಲ. ಬರಗೂರರ ಸಾಹಿತ್ಯದ ವಿಷಯವಾಗಿಯೂ ಈ ತಪ್ಪು ಆಗಿದೆ’ ಎಂದು ಹೇಳಿದರು.

‘ಪಶ್ಚಿಮದ ದೇಶಗಳಲ್ಲಿ ಸಮಾಜ ಸ್ವಚ್ಛಂದವಾಗಿದ್ದು, ಸರ್ಕಾರಗಳ ನಿರ್ಬಂಧ ಹೆಚ್ಚು. ನಮ್ಮಲ್ಲಿ ಸಮಾಜದ ಒಳಸುಳಿಗಳು ಹೆಚ್ಚಾಗಿದ್ದು, ಸರ್ಕಾರ ಮುಕ್ತವಾಗಿದೆ. ಈ ವಾತಾ ವರಣದಲ್ಲಿ ಬಂಡಾಯದ ಬರಹ ಮತ್ತು ಬರಹ ಗಾರರ ಆಲೋಚನೆಗೆ ನೈಜತೆ ಒದಗಬೇಕಿದೆ’ ಎಂದರು.

‘ಗುಜರಾತಿನಲ್ಲಿ ಭೂಕಂಪ ಸಂಭವಿಸಿದಾಗ ಮೊದಲು ಸೇವೆಗೆ ನಿಂತಿದ್ದು ಆರ್‌ಎಸ್‌ಎಸ್‌ ಸ್ವಯಂ ಸೇವಕರು. ಸಿಕ್ಕ ಬಂಗಾರವನ್ನು ಅವರು ಸಂತ್ರಸ್ತರಿಗೆ ಕೊಡಲಿಲ್ಲ ವಂತೆ; ಅದು ಬೇರೆ ಮಾತು. ನಮ್ಮ ಎಸ್‌ಎಫ್‌ಐ ಹುಡುಗರಿಗೆ ಸಂಘಟನೆ ಸೇರಿ ವರ್ಷದೊಳಗೆ ಕುರ್ಚಿ ಹಿಡಿಯುವ ಹಪಾಹಪಿ. ಸಮಾಜದ ನೋವಿಗೆ ಸ್ಪಂದಿಸುವ ತಂಡ ಬೇಕಲ್ಲವೇ’ ಎಂದು ಪ್ರಶ್ನೆ ಹಾಕಿದರು.

‘ಮಾತಿಗೆ ಬಂಡಾಯದ ಗುಣ ಬರುವುದಾದರೂ ಹೇಗೆ’ ಎಂದು ಪ್ರಶ್ನಿಸಿದ ಅವರು, ‘ಬರಗೂರರ ಮಾತನ್ನು ಕೇಳುವ ದೊಡ್ಡ ಸಮುದಾಯವೇ ಇದೆ. ಸಮಾಜಕ್ಕೆ ಮಿಡಿಯುವ ಯುವಪಡೆಯೊಂದನ್ನು ಅವರು ಕಟ್ಟಬೇಕಿತ್ತು’ ಎಂದು ಅಭಿಪ್ರಾಯಪಟ್ಟರು.

ಕೃತಿಗಳ ಬಗ್ಗೆ ಮಾತನಾಡಿದ ಭಾಷಾ ವಿದ್ವಾಂಸ ಕೆ.ವಿ. ನಾರಾಯಣ, ‘ಗುರುತು– ಗುರಿ ಇಲ್ಲದೆ ಮಾತು ಮತ್ತು ಬರಹ ಚರ್ಮದ ನಾಣ್ಯಗಳಂತೆ ಬೆಲೆ ಕಳೆದುಕೊಂಡಿದ್ದರಿಂದ ಭಾಷೆಗೆ ಮತ್ತೊಂದು ಬಿಕ್ಕಟ್ಟು ಎದುರಾಗಿದೆ’ ಎಂದು ವಿಷಾದಿಸಿದರು.

‘ವಿದ್ಯುನ್ಮಾನ ಮಾಧ್ಯಮದಿಂದ ಒತ್ತಡ ವಿಪರೀತವಾಗಿ ಹೆಚ್ಚಿದ್ದು, ಆ ಕ್ಷಣವೇ ಎಲ್ಲವೂ ತೀರ್ಮಾನವಾಗಬೇಕು ಎಂಬ ಹಟ ಎದ್ದು ಕಾಣುತ್ತಿದೆ. ಕಪ್ಪು–ಬಿಳುಪು ನಡುವಿನ ನೂರಾರು ಬಣ್ಣಗಳು ಯಾರಿಗೂ ಬೇಡವಾಗಿವೆ. ಇಂತಹ ಸಂದರ್ಭದಲ್ಲಿ ಅಭಿಪ್ರಾಯ ರೂಪಿಸುವ ಕೈಂಕರ್ಯದಲ್ಲಿ ತೊಡಗಲು ಧೈರ್ಯಬೇಕು. ಬರಗೂರು ಆ ಕೆಲಸವನ್ನು ಸಮರ್ಥವಾಗಿ ಮಾಡಿಕೊಂಡು ಬಂದಿದ್ದಾರೆ’ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬರಗೂರು, ‘ಕಳೆದ ಎರಡೂವರೆ ವರ್ಷಗಳಿಂದ ನನ್ನ ಯಾವುದೇ ಕೃತಿ ಬಂದಿರಲಿಲ್ಲ. ಸಾಹಿತ್ಯಾಸಕ್ತರಿಗೆ ಇದೊಂದು ಸಂತೋಷದ ಸಂಗತಿಯಾಗಿತ್ತು’ ಎಂದು ಚಟಾಕಿ ಹಾರಿಸಿದರು. ‘ರಾಜಕೀಯ ಸಂಕುಚಿತಗಳನ್ನು ಮೀರಿ ಬೆಳೆದವರು ಎಸ್‌.ಎಂ.ಕೃಷ್ಣ. ವಾಗ್ವಾದಗಳನ್ನು ಬೆಳೆಸಿದವರು ಅನಂತಮೂರ್ತಿ’ ಎಂದು ಕೊಂಡಾಡಿದರು.

‘ಹಿಂದೊಮ್ಮೆ ಪುಸ್ತಕ ಬಿಡುಗಡೆಗೆ ಕರೆದಾಗ ಅನಂತಮೂರ್ತಿ ಬಂದಿರಲಿಲ್ಲ. ಅದೇ ಸಿಟ್ಟಿನಿಂದ ಮತ್ತೆ ಕರೆದಿರಲಿಲ್ಲ. ಇಂತಹ ಅಭಿಪ್ರಾಯಗಳನ್ನು ಅವರ ಮುಂದೆ ಮುಕ್ತವಾಗಿ ಹಂಚಿಕೊಳ್ಳಬಲ್ಲಷ್ಟು ಅನಂತಮೂರ್ತಿ ದೊಡ್ಡವರು’ ಎಂದು ಹೇಳಿದರು.

ಬಿಡುಗಡೆಯಾದ ಕೃತಿಗಳು
ಅನುಸಂಧಾನ (ಪುಸ್ತಕಾವಲೋಕನ ಸಂಕಲನ) ಬೆಲೆ: ₨ 295
ದೇವರ ಗುಟ್ಟು (ಸಾಮಾಜಿಕ ಸಂಗತಿಗಳ ಸಂಕಥನ) ಬೆಲೆ: ₨150

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.