ADVERTISEMENT

ಬರ ಪರಿಹಾರ ಕಾರ್ಯ ಸಮರ್ಪಕ: ಡಿವಿಎಸ್ ಉತ್ತರ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2012, 19:30 IST
Last Updated 4 ಏಪ್ರಿಲ್ 2012, 19:30 IST

ಬೆಂಗಳೂರು: `ಬರ ಪರಿಹಾರ ಕಾರ್ಯಗಳ ಅನುಷ್ಠಾನದಲ್ಲಿ ಅಧಿಕಾರಿಗಳು ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ~ ಎಂದು ಹೇಳುವ ಮೂಲಕ ಈ ಸಂಬಂಧ ತಕರಾರು ತೆಗೆದಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಪರೋಕ್ಷವಾಗಿ ತಿರುಗೇಟು ನೀಡಿದರು.

ಶಿವಾಜಿನಗರದ ಪ್ರಸಿದ್ಧ ಮುತ್ಯಾಲಮ್ಮ ರಥೋತ್ಸವದ ಅಂಗವಾಗಿ ಬುಧವಾರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.

`ಬರ ಪರಿಹಾರ ಕಾರ್ಯಗಳನ್ನು ಮತ್ತಷ್ಟು ಚುರುಕುಗೊಳಿಸಲು ಸಚಿವರ ನೇತೃತ್ವದ ಮೂರು ತಂಡಗಳನ್ನು ರಚಿಸಲಾಗಿದೆ. ಇದಲ್ಲದೆ, ಅಧಿಕಾರಿಗಳು ಕೂಡ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ~ ಎಂದು ಅವರು ಹೇಳಿದರು.

ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ಯಡಿಯೂರಪ್ಪ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಅವರು, ಯಾರೇ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಕೆಳಹಂತದ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತಂದರೂ ಖಂಡಿತ ಅವುಗಳನ್ನು ಸರಿ ಮಾಡಲು ಕ್ರಮ ತೆಗೆದುಕೊಳ್ಳಲಾಗುವುದು~ ಎಂದರು.

`ಯಡಿಯೂರಪ್ಪ ಇರಬಹುದು, ಅಥವಾ ಈಶ್ವರಪ್ಪ, ಸಿದ್ದರಾಮಯ್ಯ, ಪರಮೇಶ್ವರ್, ದೇವೇಗೌಡ... ಯಾರೇ ಇರಲಿ, ಅವರು ನೀಡುವ ಸಲಹೆಗಳಿಗೆ ಸ್ಪಂದಿಸಲಾಗುವುದು~ ಎಂದು  ಅವರು ಇದೇ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.