ಬೆಂಗಳೂರು: `ರಾಜ್ಯದಲ್ಲಿನ ಪರಿಸ್ಥಿತಿ ನಿಭಾಯಿಸಲು ಆಗದಿದ್ದರೆ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ರಾಜೀನಾಮೆ ನೀಡಿ, ವಿಧಾನಸಭೆ ವಿಸರ್ಜಿಸಲಿ~ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಶನಿವಾರ ಆಗ್ರಹಿಸಿದರು.
ಪಕ್ಷದ ಕಚೇರಿಯಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಬಿಜೆಪಿಯಲ್ಲಿ ಒಳಜಗಳ ಹೆಚ್ಚಾಗಿದೆ. ಸಚಿವರು, ಮುಖ್ಯಮಂತ್ರಿಗಳ ಮಾತು ಕೇಳುತ್ತಿಲ್ಲ. ಕೆಲ ಸಚಿವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಪ್ರವಾಸ ಮಾಡುತ್ತಿದ್ದಾರೆ. ಬರ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ~ ಎಂದು ಟೀಕಿಸಿದರು.
`ಅಧಿಕಾರಿಗಳು ತಮ್ಮ ಜವಾಬ್ದಾರಿಸರಿಯಾಗಿ ನಿಭಾಯಿಸುತ್ತಿಲ್ಲ. ಆಡಳಿತದಲ್ಲಿ ಅಸ್ಥಿರತೆ ಉಂಟಾಗಿದೆ. ಆದ್ದರಿಂದ ವಿಧಾನ ಸಭೆ ವಿಸರ್ಜಿಸಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬೇಕು~ ಎಂದರು.
ಬರ ಪರಿಸ್ಥಿತಿ ನಿರ್ವಹಣೆಗೆ ಕೇಂದ್ರದಿಂದ ಹೆಚ್ಚಿನ ಅನುದಾನ ಪಡೆಯಲು ಸರ್ವ ಪಕ್ಷಗಳ ನಿಯೋಗವನ್ನು ನವದೆಹಲಿಗೆ ಕರೆದುಕೊಂಡು ಹೋಗುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ ಈ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ. ಮೊದಲು ಪಕ್ಷದ ಮುಖಂಡರೊಂದಿಗೆ ಚರ್ಚಿಸಿ, ಬರ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಡಬೇಕು. ಆ ನಂತರ ಸರ್ವಪಕ್ಷಗಳ ನಿಯೋಗದಲ್ಲಿ ಭಾಗವಹಿಸಬೇಕೇ, ಬೇಡವೇ ಎಂದು ನಿರ್ಧರಿಸಲಾಗುವುದು ಎಂದರು.
ಅಕ್ಟೋಬರ್ 4ರಂದು ಬರಪೀಡಿತ ತಾಲ್ಲೂಕುಗಳ ಬಗ್ಗೆ ಘೋಷಣೆ ಮಾಡಿದರೂ, ಬರ ನಿರ್ವಹಣೆಗೆ ಸರ್ಕಾರ ಯಾವುದೇ ಕ್ರಮಕೈಗೊಂಡಿರಲಿಲ್ಲ. ಈಚೆಗಷ್ಟೇ ಚಟುವಟಿಕೆಗಳು ಶುರುವಾಗಿವೆ ಎಂದು ಅವರು ಟೀಕಿಸಿದರು.
ಪಕ್ಷದ ಹಿರಿಯ ಮುಖಂಡರಾದ ಮೋಟಮ್ಮ, ವೀರಣ್ಣ ಮತ್ತಿಕಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ನಾಯ್ಡು, ಎಂ.ಕೃಷ್ಣಪ್ಪ, ಮಲ್ಲಾಜಮ್ಮ, ಎನ್.ಮಂಜುನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.