ADVERTISEMENT

ಬಳಿಗಾರ್‌, ಕುಟುಂಬದ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 19:37 IST
Last Updated 21 ಮಾರ್ಚ್ 2014, 19:37 IST

ಬೆಂಗಳೂರು: ಇಟಿನಾ ಸಮೂಹ ಸಂಸ್ಥೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥೆ ಮಿನು (26) ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅವರ ಸಂಬಂಧಿಕರಾದ ಐಎಎಸ್‌ ಅಧಿಕಾರಿ ವಿ.ಪಿ.ಬಳಿಗಾರ್‌ ಮತ್ತು ಕುಟುಂಬ ಸದಸ್ಯರು ಸೇರಿದಂತೆ ಐದು ಮಂದಿ ವಿರುದ್ಧ ನಗರದ ಎಚ್‌ಎಸ್‌ಆರ್‌ ಲೇಔಟ್‌ ಠಾಣೆಯಲ್ಲಿ ಶುಕ್ರವಾರ ಪ್ರಕರಣ ದಾಖಲಾಗಿದೆ.

ಮಿನು ಅವರ ಅಣ್ಣ ಮನು ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಮನು ಅವರು ಬಳಿಗಾರ್‌ ಅವರ ಮಗಳ ಗಂಡ. ‘ನನ್ನ ಪತ್ನಿ ವಿಶಾಲಾಕ್ಷಿ, ಮಾವ ಬಳಿಗಾರ್‌, ಅತ್ತೆ ವಿನಯಪ್ರಭಾ, ಕಂಪೆನಿಯ ಉದ್ಯೋಗಿ ಹರ್ಷವರ್ಧನ್ ಮತ್ತು ಗ್ರಾಹಕ ರಂಜನ್ ಅವರು ತಂಗಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸರಗೊಂಡು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವಳ ಸಾವಿಗೆ ಈ ಐದು ಮಂದಿಯೇ ಕಾರಣ’ ಎಂದು ಮನು ದೂರಿನಲ್ಲಿ ತಿಳಿಸಿದ್ದಾರೆ.

ಆ ದೂರು ಆಧರಿಸಿ ಬಳಿಗಾರ್‌ ಮತ್ತು ಇತರೆ ನಾಲ್ವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಅಣ್ಣ ಮನು ಮತ್ತು ತಾಯಿ ನಾಗ­ಲಾಂಬಿಕೆ ಜತೆ ನಗರದ ಕೈಕೊಂಡನ­ಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ವಾಸ­ವಾಗಿದ್ದ ಮಿನು ಅವರು ಗುರುವಾರ ರಾತ್ರಿ ನೇಣು ಹಾಕಿಕೊಂಡಿದ್ದರು.

ರಾಜ್ಯದ ಹಿರಿಯ ಐಎಎಸ್‌ ಅಧಿಕಾರಿ­ಯಾದ ಬಳಿಗಾರ್‌ ಅವರು ಸದ್ಯ ದೆಹಲಿ­ಯಲ್ಲಿನ ವಸತಿ ಮತ್ತು ನಗರಾಭಿವೃದ್ಧಿ ನಿಗಮದ (ಹುಡ್ಕೊ) ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.