ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಸಾರಿಗೆ ಸಚಿವರು ಹಾಗೂ ಖಾಸಗಿ ಬಸ್‌ಗಳ ಮಾಲೀಕರ ಸಭೆ ನಡೆಯದಿರುವುದರಿಂದ ವೊಲ್ವೋ ಬಸ್‌ಗಳಲ್ಲಿ ‘ತುರ್ತು ನಿರ್ಗಮನ ದ್ವಾರ’ಗಳ ಅಳವಡಿಕೆಗೆ ಇನ್ನೂ ಹೆಚ್ಚಿನ ಕಾಲಾವಕಾಶ ದೊರೆತಂತಾಗಿದೆ.
ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಎಲ್ಲಾ ಐಷಾರಾಮಿ ಬಸ್‌ಗಳಲ್ಲಿ ‘ತುರ್ತು ನಿರ್ಗಮನ ದ್ವಾರ’ಗಳ ಅಳವಡಿಕೆಗೆ ಫೆಬ್ರುವರಿ ಕೊನೆಯ ವಾರದವರೆಗೆ ಗಡುವು ನೀಡಲಾಗಿತ್ತು.
ಈ ವಿಷಯದ ಕುರಿತು ಖಾಸಗಿ ಬಸ್ ಮಾಲೀಕರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಲು ಪ್ರಯತ್ನಪಟ್ಟರೂ ಈಗ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಅವರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಇದರಿಂದ ಬಸ್ ಮಾಲೀಕರಿಗೆ ಲಾಭವೇ ಆಗಿದೆ.
ಆಂಧ್ರಪ್ರದೇಶದ ಮೆಹಬೂಬ್‌ನಗರ ಮತ್ತು ಹಾವೇರಿಯ ಕುಣಿಮಳ್ಳಳ್ಳಿ ಬಳಿ 15 ದಿನಗಳ ಅಂತರದಲ್ಲಿ ಸಂಭವಿಸಿದ ಎರಡು ಬಸ್ ದುರಂತಗಳಿಂದ ಒಟ್ಟು 53 ಮಂದಿ ಮೃತಪಟ್ಟಿದ್ದರು.
ಆ ನಂತರ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಕೈಗೊಂಡಿರುವ ಕ್ರಮಗಳ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ಈ ಹಂತದಲ್ಲಿ ಸರ್ಕಾರ, ಎಲ್ಲಾ ಐಷಾರಾಮಿ ಬಸ್‌ಗಳು ಮೂರು ತಿಂಗಳೊಳಗೆ ಬಸ್ಸಿನ ಹಿಂಭಾಗ ಅಥವಾ ಬಲಭಾಗದಲ್ಲಿ ಕಿಟಕಿಯ ಗಾಜು ತೆಗೆಸಿ -ತುರ್ತು ನಿರ್ಗಮನ ದ್ವಾರಗಳನ್ನು ಅಳವಡಿಸಬೇಕು ಎಂದು ನ.16ರಂದು ಆದೇಶ ಹೊರಡಿಸಿತ್ತು.
ಸಾರಿಗೆ ಇಲಾಖೆ ಆಯುಕ್ತ ಕೆ.ಅಮರನಾರಾಯಣ ‘ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಳಿ 500 ಲಕ್ಸುರಿ ಬಸ್‌ಗಳಿವೆ. ಎಲ್ಲ ಬಸ್‌ಗಳಿಗೆ ಸರ್ಕಾರದ ನಿರ್ದೇಶನದಂತೆ ತುರ್ತು ನಿರ್ಗಮನ ದ್ವಾರಗಳನ್ನು ಅಳವಡಿಸಲಾಗಿದೆ. ಬಸ್‌ಗಳ ಮರು ವಿನ್ಯಾಸ ಮಾಡಲು ಖಾಸಗಿ ಬಸ್ ಮಾಲೀಕರಲ್ಲಿ ಸ್ವಂತ ಕಾರ್ಯಾಗಾರ ಇಲ್ಲ. ಹೀಗಾಗಿ ವಿನ್ಯಾಸ ಮರು ರೂಪಿಸುವ ಪ್ರಕ್ರಿಯೆ ನಿಧಾನವಾಗುತ್ತಿದೆ’ ಎಂದರು.
‘ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಖಾಸಗಿ ಬಸ್ ಮಾಲೀಕರು ಹಾಗೂ ಸಚಿವರ ಸಭೆ ನಡೆಯಲು ಸಾಧ್ಯವಾಗಿಲ್ಲ. ಇದರಿಂದ, ಚುನಾವಣಾ ಪ್ರಕ್ರಿಯೆ ನಡೆದ ನಂತರವೇ ಸಭೆ ನಡೆಸಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.