ADVERTISEMENT

ಬಸ್‌ನಲ್ಲಿ ರಾಸಾಯನಿಕದಿಂದ ಬೆಂಕಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 19:59 IST
Last Updated 17 ಸೆಪ್ಟೆಂಬರ್ 2013, 19:59 IST
ನೆಲಮಂಗಲ ಪೊಲೀಸರು ವಶಪಡಿಸಿಕೊಂಡಿರುವ ಆಸಿಡ್‌ ರೂಪದ ರಾಸಾಯನಿಕ ದ್ರಾವಣ
ನೆಲಮಂಗಲ ಪೊಲೀಸರು ವಶಪಡಿಸಿಕೊಂಡಿರುವ ಆಸಿಡ್‌ ರೂಪದ ರಾಸಾಯನಿಕ ದ್ರಾವಣ   

ನೆಲಮಂಗಲ: ಬೆಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತಲಾ 30ಲೀಟರ್‌ ಸಾಮ­ರ್ಥ್ಯದ ಆರು ಕ್ಯಾನ್‌ಗಳಲ್ಲಿ ಅಕ್ರಮ­ವಾಗಿ ಸಾಗಿಸುತ್ತಿದ್ದ ಆಸಿಡ್‌ ರೂಪದ ರಾಸಾಯನಿಕ ದ್ರಾವಣದ ಪೈಕಿ ನಾಲ್ಕು ಕ್ಯಾನ್‌ಗಳನ್ನು ಸ್ಥಳೀಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಯಶವಂತಪುರದ ಆರ್‌­ಎಂಸಿ ಯಾರ್ಡ್‌ ಬಳಿ ರಾಸಾಯ­ನಿಕ­ವುಳ್ಳ ಆರು ಕ್ಯಾನ್‌ನೊಂದಿಗೆ ಪ್ರಯಾ­­ಣಿಕನೊಬ್ಬ ಬಸ್‌ ಹತ್ತಿದ. ನಿರ್ವಾಹಕ ವಿಚಾರಿಸಿದಾಗ ಪಾಮ್‌ ಎಣ್ಣೆ ಎಂದು ಸುಳ್ಳು ಹೇಳಿ ಬಸ್‌ನ ಹಿಂಬದಿ ಸೀಟುಗಳಲ್ಲಿ ಇಟ್ಟುಕೊಂಡು ಪ್ರಯಾ­ಣಿಸುತ್ತಿದ್ದ ಎಂದು ತಿಳಿದು­ಬಂದಿದೆ.

ಮೇಲ್ಸೇತುವೆ ಮೂಲಕ ಬಂದ ಬಸ್ಸು ಕುಣಿಗಲ್‌ ವೃತ್ತದ ಬಳಿ ಸರ್ವೀಸ್‌ ರಸ್ತೆಗೆ ತಿರುವು ಪಡೆದು, ರಸ್ತೆ ಹಂಪ್‌ಮೇಲೆ ಎಗರಿದಾಗ ಎರಡು ಕ್ಯಾನ್‌ಗಳ ಮುಚ್ಚಳ ಬಿಚ್ಚಿಕೊಂಡು, ಬಸ್‌ನ ಒಳಭಾಗವನ್ನೆಲ್ಲಾ ಆವರಿಸಿತು. ತಕ್ಷಣ ಬೆಂಕಿ ಕಾಣಿಸಿಕೊಂಡು, ಘಾಟಿನ ರೂಪದ ಹೊಗೆ ಎದ್ದಿತು ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.

ಗಾಬರಿಗೊಂಡ ಬಸ್‌ನಲ್ಲಿದ್ದ 19ಮಂದಿ ಪ್ರಯಾಣಿಕರು ಕಿರುಚಿ­ಕೊಂಡರು. ಚಾಲಕ ತಕ್ಷಣ ಬಸ್‌ ನಿಲ್ಲಿಸಿ ಎಲ್ಲ ಪ್ರಯಾಣಿರನ್ನು ಕೆಳಗಿಳಿಸಿ, ಪೊಲೀ­ಸರಿಗೆ ವಿಷಯ ತಿಳಿಸಿದ್ದಾನೆ. ಪೊಲೀಸರು ಕೂಡಲೇ ಅಗ್ನಿಶಾಮಕ ದಳದೊಂದಿಗೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಈ ಎಲ್ಲ ಆವಾಂತರಕ್ಕೆ ಕಾರಣನಾದ ವ್ಯಕ್ತಿ ಪಲಾಯನ ಮಾಡಿದ್ದಾನೆ ಎಂದು ಪೊಲೀ­ಸರು ತಿಳಿಸಿದ್ದಾರೆ.

ಪಟ್ಟಣ ಠಾಣೆಯ ಪೊಲೀಸರು ಪ್ರಕರಣ ದಾಖ­ಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.