ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಪದೇ ಪದೇ ಬಸ್ ಪ್ರಯಾಣ ದರ ಏರಿಸುತ್ತಿರುವುದನ್ನು ಖಂಡಿಸಿ ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ವತಿಯಿಂದ ನಗರದಲ್ಲಿ ಮಂಗಳವಾರ ‘50 ಪೈಸೆ ಅಭಿಯಾನ’ ನಡೆಸಲಾಯಿತು.
ಬಿಎಂಟಿಸಿ ವತಿಯಿಂದ ಮಂಗಳವಾರ ಬಸ್ ದಿನಾಚರಣೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ವೇದಿಕೆಯು ಈ ಅಭಿಯಾನ ನಡೆಸಿತು. ನಗರದ ಬನ್ನಪ್ಪ ಉದ್ಯಾನದಿಂದ ಆನಂದ ರಾವ್ ವೃತ್ತದ ವರೆಗೆ ರ್‍ಯಾಲಿ ನಡೆಸಲಾಯಿತು. ಪ್ರಯಾಣ ದರ ಏರಿಕೆ ವಿರುದ್ಧ ವೇದಿಕೆಯು 10 ಲಕ್ಷ ಸಹಿ ಸಂಗ್ರಹಿಸುವ ಅಭಿಯಾನ ಹಮ್ಮಿಕೊಂಡಿದ್ದು, ಮಂಗಳವಾರ ಸಂಜೆವರೆಗೆ 10,000 ಸಹಿ ಸಂಗ್ರಹಿಸಲಾಗಿದೆ.
ವೇದಿಕೆಯ ಸಂಚಾಲಕ ವಿನಯ್ ಶ್ರೀನಿವಾಸ್ ಮಾತನಾಡಿ, ‘ಒಂದೂವರೆ ವರ್ಷದಲ್ಲಿ ಬಿಎಂಟಿಸಿ ಮೂರು ಬಾರಿ ದರ ಏರಿಸಿದೆ. ಒಟ್ಟಾರೆ ಶೇ 50ರಷ್ಟು ದರ ಹೆಚ್ಚಾಗಿದೆ. ಈಗ ಮತ್ತೆ ರೂ. 1 ದರ ಏರಿಸಲಾಗಿದೆ. ಈ ಮೂಲಕ ಪ್ರಯಾಣಿಕರಿಗೆ ಬರೆ ಹಾಕಲಾಗಿದೆ. ಪ್ರಯಾಣ ದರ ಏರಿಕೆಯಲ್ಲಿ ಬಿಎಂಟಿಸಿ ದೇಶದಲ್ಲೇ ನಂ. 1 ಸ್ಥಾನದಲ್ಲಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಆಡಳಿತ ವೈಫಲ್ಯ, ಭ್ರಷ್ಟಾಚಾರ, ಉಪಕರಣಗಳ ಕಳಪೆ ನಿರ್ವಹಣೆ ಮೊದಲಾದ ಕಾರಣದಿಂದ ಬಿಎಂಟಿಸಿ ನಷ್ಟ ಅನುಭವಿಸುತ್ತಿದೆ. ಈ ಸಮಸ್ಯೆಗಳನ್ನು ಪರಿಹರಿಸಲು ಆಡಳಿತ ಮಂಡಳಿ ಕಾಳಜಿ ವಹಿಸುತ್ತಿಲ್ಲ. ಡೀಸೆಲ್ ದರ ಏರಿಕೆ ಕಾರಣ ನೀಡಿ ನಷ್ಟವನ್ನು ಪ್ರಯಾಣಿಕರ ಮೇಲೆ ವರ್ಗಾಯಿಸಲಾಗುತ್ತಿದೆ’ ಎಂದು ಅವರು

ಕಿಡಿಕಾರಿದರು.
‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಮಾನ ನಿಲ್ದಾಣ ಹಾಗೂ ಮೆಟ್ರೊದಂತಹ ಇತರ ಸಾರಿಗೆಗಳಿಗೆ ದೊಡ್ಡ ಪ್ರಮಾಣದ ಹಣವನ್ನು ಹಂಚಿಕೆ ಮಾಡುತ್ತಿವೆ. ಮೆಟ್ರೊ ರೈಲು ಸೇವೆಗೆ ಹೋಲಿಸಿದರೆ ಬಸ್ ಸೇವೆ ಆರು ಪಟ್ಟು ಅಧಿಕ ಜನರನ್ನು ತಲುಪುತ್ತಿದೆ. ಅಂದರೆ 50 ಲಕ್ಷ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿದೆ. ಮೆಟ್ರೊಗೆ ಸರ್ಕಾರ ರೂ. 40,000 ಕೋಟಿ ಮೀಸಲಿಡುತ್ತಿದೆ. ಇನ್ನೊಂದೆಡೆ, ಬಸ್ ಸೇವೆಗಳ ಕಾರ್ಯಾಚರಣೆಗಾಗಿ ರೂ. 100 ಕೋಟಿ ನೀಡುತ್ತಿರುವುದು ಹಾಸ್ಯಾಸ್ಪದ’ ಎಂದು ಅವರು ಟೀಕಿಸಿದರು.
‘ಬಿಎಂಟಿಸಿ ಸಾರ್ವಜನಿಕ ಸಾರಿಗೆ. ಸಾರಿಗೆ ಮನುಷ್ಯನ ಹಕ್ಕು. ಈ ಹಕ್ಕನ್ನು ಲಾಭಕ್ಕಾಗಿ ಪರಿವರ್ತಿಸುವುದು ಅಸಹನೀಯ’ ಎಂದು ಪ್ರತಿಭಟನಾಕಾರರು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.