ADVERTISEMENT

ಬಸ್ ಡಿಕ್ಕಿ: ಬೈಕ್ ಸವಾರ ಸಾವು

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 19:30 IST
Last Updated 26 ಏಪ್ರಿಲ್ 2012, 19:30 IST

ಬೆಂಗಳೂರು: ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಸಾವಿಗೀಡಾಗಿರುವ ಘಟನೆ ಚಾಮರಾಜಪೇಟೆಯಲ್ಲಿ ಬುಧವಾರ ಸಂಭವಿಸಿದೆ.ಕಲಾಸಿಪಾಳ್ಯದ ನಿವಾಸಿ ಪಿ.ಎಂ. ರೇಣುಕಾ ಪ್ರಸಾದ್ (17) ಮೃತಪಟ್ಟವರು. ಬುಧವಾರ ಮಧ್ಯಾಹ್ನ ಎರಡು ಗಂಟೆಯ ಸುಮಾರಿಗೆ ಅವರು ಕಲಾಸಿಪಾಳ್ಯದಿಂದ ಬನಶಂಕರಿಯ ಕಡೆಗೆ ಬೈಕ್‌ನಲ್ಲಿ ಹೊರಟಿದ್ದರು.

ಚಾಮರಾಜಪೇಟೆಯ ಸಜ್ಜನ್‌ರಾವ್ ವೃತ್ತದಲ್ಲಿ ಹೋಗುತ್ತಿರುವಾಗ ಹಿಂದಿನಿಂದ ಬಂದ ಬಿಎಂಟಿಸಿ ಬಸ್ ಬೈಕ್‌ಗೆ ಡಿಕ್ಕಿ ಹೊಡೆದಿದೆ.ಬೈಕ್‌ನಿಂದ ಕೆಳಗೆ ಬಿದ್ದು ತಲೆಗೆ ಗಂಭೀರವಾಗಿ ಪೆಟ್ಟಾಗಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಯಲ್ಲಿ ಬುಧವಾರ ಮೃತ ಪಟ್ಟಿದ್ದಾರೆ.

ಬಸ್ ಚಾಲಕ ಸೈಯ್ಯದ್ ಹುಸೇನ್‌ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಚಾಮರಾಜಪೇಟೆ ಸಂಚಾರ ಪೊಲೀಸರು ತಿಳಿಸಿದ್ದಾರೆ.

ಮಹಿಳೆ ಆತ್ಮಹತ್ಯೆ:ಮಹಿಳೆಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತ್ಯಾಗರಾಜನಗರ ಸಮೀಪದ ಬೈರಪ್ಪಬ್ಲಾಕ್‌ನಲ್ಲಿ ಬುಧವಾರ ರಾತ್ರಿ ನಡೆದಿದೆ.

ಸ್ಮಿತಾ (29) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮೆಡಿಕಲ್ ಶಾಪ್ ಒಂದರಲ್ಲಿ ಕೆಲಸ ಮಾಡುತಿದ್ದ ನವೀನ್‌ಕುಮಾರ್ ಅವರನ್ನು ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದ ಅವರು ಬೈರಪ್ಪಬ್ಲಾಕ್‌ನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಇವರಿಗೆ ಎರಡು ವರ್ಷದ ನಮಿತ್ ಎಂಬ ಗಂಡು ಮಗು ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಸಂಬಂಧಿಕರೊಬ್ಬರ ಮದುವೆಗೆ ಹೋಗಿದ್ದ ಅವರು ರಾತ್ರಿ ಮನೆಗೆ ಬಂದು ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಗಂಡ ಹೆಂಡತಿ ಅನ್ಯೋನ್ಯವಾಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದರು. ತ್ಯಾಗರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು: ಕುಟುಂಬ ಸದಸ್ಯರೆಲ್ಲಾ ಊರಿಗೆ ಹೋಗಿದ್ದ ವೇಳೆ ಬಾಗಿಲು ಮುರಿದು ಮನೆಯೊಳಗೆ ನುಗ್ಗಿದ ದುಷ್ಕರ್ಮಿಗಳು 80 ಸಾವಿರ ರೂಪಾಯಿ ನಗದು ಹಾಗೂ 1.6 ಕೆ.ಜಿ ತೂಕದ ಬೆಳ್ಳಿಯ ವಸ್ತುಗಳನ್ನು ದೋಚಿರುವ ಘಟನೆ ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಈ ಸಂಬಂಧ ಬಸವೇಶ್ವರನಗರದ ಮೂರನೇ ಬ್ಲಾಕ್ ನಿವಾಸಿ ಮಾರುತಿ ರಾವ್ ದೂರು ನೀಡಿದ್ದಾರೆ. `ಏ.19ರಂದು ಕುಟುಂಬದವರೆಲ್ಲಾ ಮಗನ ಮದುವೆಗೆಂದು ಊರಿಗೆ ಹೋಗಿದ್ದೆವು. ಬುಧವಾರ (ಏ.25) ರಾತ್ರಿ ಮನೆಗೆ ಹಿಂತಿರುಗಿದಾಗ ವಿಷಯ ತಿಳಿಯಿತು.

ದುಷ್ಕರ್ಮಿಗಳು ನಗದು ಸೇರಿದಂತೆ 1.8 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ದೋಚಿದ್ದಾರೆ~ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆಂದು ಪೊಲೀಸರು ಹೇಳಿದ್ದಾರೆ. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮ್ಯಾಕ್ ಡೊನಾಲ್ಡ್‌ಗೆ ದಂಡ: ನಗರದ ನ್ಯೂ ಬಿಇಎಲ್ ರಸ್ತೆಯ ಮ್ಯಾಕ್ ಡೊನಾಲ್ಡ್ ರೆಸ್ಟೋರಂಟ್‌ನಲ್ಲಿ ಸಸ್ಯಾಹಾರಕ್ಕೆ ಬದಲಾಗಿ ಮಾಂಸಾಹಾರ ಮಾರಾಟ ಮಾಡಿದ್ದಕ್ಕಾಗಿ ಬಿಬಿಎಂಪಿ 15 ಸಾವಿರ ರೂಪಾಯಿಗಳ ದಂಡ ವಿಧಿಸಿದೆ.

ಗುರುವಾರ ರೆಸ್ಟೋರಂಟ್ ಮೇಲೆ ದಾಳಿ ನಡೆಸಿದ ಬಿಬಿಎಂಪಿಯ ಪಶ್ಚಿಮ ವಿಭಾಗದ ಆರೋಗ್ಯಾಧಿಕಾರಿಗಳು ದಂಡ ವಿಧಿಸಿ, ತಾತ್ಕಾಲಿಕವಾಗಿ ರೆಸ್ಟೋರಂಟ್ ಮುಚ್ಚಲು ಆದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.