ADVERTISEMENT

ಬಸ್ ದರ ಹೆಚ್ಚಳ: ಲೋಕಸತ್ತಾ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2013, 19:50 IST
Last Updated 6 ಜುಲೈ 2013, 19:50 IST

ಬೆಂಗಳೂರು: ಬಸ್ ಪ್ರಯಾಣ ದರ ಹೆಚ್ಚಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಲೋಕಸತ್ತಾ ಪಕ್ಷದ ಕಾರ್ಯಕರ್ತರು ಶಾಂತಿನಗರದಲ್ಲಿರುವ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಪ್ರಧಾನ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಪಕ್ಷದ ಕಾರ್ಯದರ್ಶಿ ಪಿ.ಎಂ. ದೀಪಕ್ ಮಾತನಾಡಿ, `ಪ್ರತಿನಿತ್ಯ ಸುಮಾರು 70 ಲಕ್ಷ ಜನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್‌ಗಳಲ್ಲಿ ಹಾಗೂ 40 ಲಕ್ಷ ಮಂದಿ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಾರೆ. ಸರ್ಕಾರ, ಇತ್ತೀಚೆಗೆ ಬಸ್ ಪ್ರಯಾಣ ದರವನ್ನು ಹೆಚ್ಚಿಸಿರುವುದರಿಂದ ಪ್ರಯಾಣಿಕರಿಗೆ ಹೊರೆಯಾಗುತ್ತಿದೆ. ಅದರಲ್ಲೂ ತಮ್ಮ ಓಡಾಟಕ್ಕೆ ಬಸ್‌ಗಳನ್ನೇ ಅವಲಂಬಿಸಿರುವ ಬಡ ಹಾಗೂ ಮಧ್ಯಮ ವರ್ಗದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.  ಹೀಗಾಗಿ, ಸರ್ಕಾರ ದರ ಏರಿಕೆ ಕ್ರಮವನ್ನು ಕೂಡಲೇ ಹಿಂಪಡೆಯಬೇಕು' ಎಂದು ಒತ್ತಾಯಿಸಿದರು.

ನಂತರ ಮಾತನಾಡಿದ ಪಕ್ಷದ ಕಾರ್ಯಕರ್ತೆ ರೋಹಿಣಿ, `ಈ ಬಾರಿಯ ಬಜೆಟ್‌ನಲ್ಲಿ ಸರ್ಕಾರ ಸಾರಿಗೆ ಸಂಸ್ಥೆಗಳ ನಿರ್ವಹಣೆಗಾಗಿ `ಕಾರ್ಯಾಚರಣಾ ಅನುದಾನ' ಎಂದು 200 ಕೋಟಿ ರೂಪಾಯಿ ಮೀಸಲಿಡಬೇಕು. ಇದರಿಂದ ಸಾರಿಗೆ ಸಂಸ್ಥೆ ಆರ್ಥಿಕವಾಗಿ ಸಬಲವಾಗುತ್ತದೆ. ಜತೆಗೆ, ನಗರದ ವಿವಿಧ ಭಾಗಗಳಿಗೆ ತನ್ನ ಸೇವೆಯನ್ನು ವಿಸ್ತರಿಸಲು ಸಾಧ್ಯವಾಗುತ್ತದೆ. ಈ ಅನುದಾನ ಸಿಗದಿದ್ದರೆ, ಬಿಎಂಟಿಸಿ ವಿಧಿ ಇಲ್ಲದೆ ಪ್ರಯಾಣ ದರ ಏರಿಕೆ ಮಾಡುತ್ತದೆ' ಎಂದರು.

ಖಾಸಗಿ ವಾಹನಗಳ ಮೇಲೆ ನಿಲುಗಡೆ ಶುಲ್ಕ ವಿಧಿಸಬೇಕೆಂದು ಈಗಾಗಲೇ ನಗರ ಸಾರಿಗೆ ಇಲಾಖೆ (ಡಿಯುಎಲ್‌ಟಿ) ಚಿಂತಿಸಿದೆ. ಖಾಸಗಿ ವಾಹನಗಳ ಶುಲ್ಕದಿಂದ ಬೆಂಗಳೂರು ನಗರದಲ್ಲೇ ವಾರ್ಷಿಕ 200 ಕೋಟಿ ಸಂಗ್ರಹವಾಗುತ್ತದೆ ಎಂದು ಅಂದಾಜಿಸಲಾಗಿದೆ. ಈ ಮೊತ್ತವನ್ನೇ ಬಿಎಂಟಿಸಿಗೆ ಅನುದಾನವಾಗಿ ನೀಡಬಹುದು' ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.