ADVERTISEMENT

ಬಸ್ ಪಲ್ಟಿ: 30 ಮಂದಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST

ನಾಗಮಂಗಲ: ಖಾಸಗಿ ಬಸ್ ಪಲ್ಟಿ ಹೊಡೆದ ಪರಿಣಾಮ ವಿದ್ಯಾರ್ಥಿಗಳು ಸೇರಿದಂತೆ 30ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ತಾಲ್ಲೂಕಿನ ತಟ್ಟಹಳ್ಳಿ ಗೇಟ್ ಸಮೀಪದ ತಿರುವಿನಲ್ಲಿ ಶನಿವಾರ ನಡೆದಿದೆ.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು, ರೋಟರಿ ವಿದ್ಯಾ ಸಂಸ್ಥೆಯಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಹಾಗೂ ದೇವಲಾಪುರ ಸುತ್ತಲಿನ ಗ್ರಾಮಸ್ಥರು ಗಾಯಗೊಂಡವರಲ್ಲಿ ಸೇರಿದ್ದಾರೆ.

ಗಾಯಾಳುಗಳಿಗೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗೆ ಆದಿಚುಂಚನಗಿರಿ ಆಸ್ಪತ್ರೆ ಮತ್ತು ಮಂಡ್ಯದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.

ದೇವಲಾಪುರ ಗ್ರಾಮದಿಂದ ನಾಗಮಂಗಲಕ್ಕೆ ಬರುತ್ತಿದ್ದ ಖಾಸಗಿ ಬಸ್ ಅತಿಯಾದ ವೇಗದ ಚಾಲನೆಯಿಂದ ತಿರುವಿನಲ್ಲಿ ಚಾಲಕನ ನಿಯಂತ್ರಣಕ್ಕೆ ಸಿಗಲಿಲ್ಲ. ಆಗ ಬಸ್ ಪಲ್ಟಿ ಹೊಡೆಯಿತು.

`ಬಸ್ಸು ದೇವಲಾಪುರದಿಂದ ಹೊರಡುವ ಸಂದರ್ಭದಲ್ಲೇ ಹಿಂದಿನ ಟೈರ್ ಪಂಕ್ಚರ್ ಆಗಿದ್ದು ಗಮನಕ್ಕೆ ಬಂದಿತ್ತು. ಆತನ ಗಮನಕ್ಕೆ ತಂದರೂ ಉಡಾಫೆಯಿಂದ ವರ್ತಿಸಿದ. ಬೇಕಾದವರೂ ಬನ್ನಿ ಎಂಬ ಉತ್ತರ ನೀಡಿದ. ಅನಿವಾರ್ಯವಾಗಿ ಈ ಬಸ್‌ನಲ್ಲಿ ಪ್ರಯಾಣ ಮಾಡಬೇಕಾಯಿತು~ ಎಂದು ಗಾಯಗೊಂಡವರು ತಿಳಿಸಿದರು.

ಈ ಘಟನೆಯಲ್ಲಿ ಕಂಡಕ್ಟರ್ ಸಹ ಗಾಯಗೊಂಡಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ನಾಲ್ಕೈದು ಮಂದಿಗೆ ತೀವ್ರ ಸ್ವರೂಪದ ಗಾಯವಾಗಿದೆ.                      
ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.