ADVERTISEMENT

`ಬಹುಕಾಲದ ಮೀಸಲಾತಿ ಸೂಕ್ತವಲ್ಲ'

​ಪ್ರಜಾವಾಣಿ ವಾರ್ತೆ
Published 17 ಜೂನ್ 2013, 19:42 IST
Last Updated 17 ಜೂನ್ 2013, 19:42 IST

ಬೆಂಗಳೂರು: `ದಲಿತರಿಗೆ ಬಹುಕಾಲದ ಮೀಸಲಾತಿಯನ್ನು ಸ್ವತಃ ಅಂಬೇಡ್ಕರ್ ಅವರೇ ವಿರೋಧಿಸಿದ್ದರು. ಮುಂದುವರಿದ ದಲಿತರು ಮೀಸಲಾತಿ ಬೇಕು ಎನ್ನುವುದು ಅಂಬೇಡ್ಕರ್ ಅವರ ತತ್ವಕ್ಕೆ ವಿರೋಧವಾಗಿದೆ' ಎಂದು ಅಬಕಾರಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

ರಾಜ್ಯ ಅಬಕಾರಿ ಇಲಾಖೆ ಪರಿಶಿಷ್ಟ ಜಾತಿ ಮತ್ತು ಪಂಗಡ ನೌಕರರ ಕ್ಷೇಮಾಭಿವೃದ್ಧಿ ಸಂಘವು ನಗರದ ಯವನಿಕ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 122ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಸಮಾನತೆಯ ಕೂಗಿನ ಜತೆಗೆ ಸ್ವಾಭಿಮಾನದ ಕಿಚ್ಚು ಸದಾ ದಲಿತರ ಎದೆಯಲ್ಲಿ ಉರಿಯುತ್ತಿರಬೇಕು. ಆಗ ಮಾತ್ರ ಏಳಿಗೆ ಸಾಧ್ಯ. ಮೀಸಲಾತಿ ಪಡೆದುಕೊಂಡ ದಲಿತರು ಈ ಸಮಾಜದ ಏಳಿಗೆಗಾಗಿ ಶ್ರಮಿಸಿದಾಗ ಅಂಬೇಡ್ಕರ್ ಅವರ ಆಶಯಕ್ಕೆ ಅರ್ಥ ಬರುತ್ತದೆ' ಎಂದರು.

`ದಲಿತಕೇರಿಗಳಲ್ಲಿ ಅಂಬೇಡ್ಕರ್ ಅವರೊಂದಿಗೆ ಬಸವಣ್ಣ ಮತ್ತು ಬುದ್ಧ ಜಯಂತ್ಸುವಗಳು ನಡೆಯಬೇಕು. ಆಡಂಬರದ ಬದುಕಿಗೆ ಸಾಲಮಾಡಿ ನಂತರ ಮಕ್ಕಳಿಗೆ ಶಿಕ್ಷಣ ನೀಡುವ ಸಂದರ್ಭದಲ್ಲಿ ಸರ್ಕಾರದತ್ತ ಮುಖಮಾಡುವ ಪ್ರವೃತ್ತಿಯನ್ನು ದಲಿತರು ಬಿಡಬೇಕು' ಎಂದು ಸಲಹೆ ನೀಡಿದರು.

ಕವಿ ಡಾ.ಸಿದ್ಧಲಿಂಗಯ್ಯ, `ಆಧುನಿಕ ಕಾಲಘಟ್ಟದಲ್ಲಿ ಶೋಷಣೆಗಳು  ಹೊಸ ರೂಪವನ್ನು ಪಡೆಯುತ್ತಿದ್ದು, ಅದನ್ನು ಹತ್ತಿಕ್ಕುವತ್ತ ದಲಿತರೆಲ್ಲರೂ ಒಂದುಗೂಡಬೇಕು' ಎಂದರು.ಇಲಾಖೆಯ ಆಯುಕ್ತ ಸಿ.ಸೋಮಶೇಖರ್ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT