ADVERTISEMENT

ಬಹುತೇಕರಿಗೆ `ಡೆಂಗೆ ಶಾಕ್ ಸಿಂಡ್ರೋಮ್'

​ಪ್ರಜಾವಾಣಿ ವಾರ್ತೆ
Published 9 ಜುಲೈ 2013, 19:51 IST
Last Updated 9 ಜುಲೈ 2013, 19:51 IST

ಬೆಂಗಳೂರು: ನಗರದಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ ಬಹುತೇಕ ಮಂದಿ ಡೆಂಗೆ ಜ್ವರದ ಗಂಭೀರ ಸ್ವರೂಪ `ಡೆಂಗೆ ಶಾಕ್ ಸಿಂಡ್ರೋಮ್' ನಿಂದ ಬಳಲುತ್ತಿರುವ ಆತಂಕಕಾರಿ ಅಂಶವೊಂದು ಬೆಳಕಿಗೆ ಬಂದಿದೆ.

ಡೆಂಗೆ ಶಾಕ್ ಸಿಂಡ್ರೊಮ್‌ನಲ್ಲಿ ಡೆಂಗೆ ಜ್ವರದ ಸಾಮಾನ್ಯ ರೋಗಲಕ್ಷಣಗಳೇ ಉಲ್ಬಣ ಸ್ಥಿತಿಯಲ್ಲಿರುತ್ತದೆ. ಪ್ರಮುಖವಾಗಿ ಆಗಾಗ್ಗೆ ವಾಂತಿ ಹಾಗೂ ರಕ್ತದಲ್ಲಿ  ಪ್ಲೆಟ್‌ಲೆಟ್ ಸಂಖ್ಯೆ ಕಡಿಮೆಯಾಗುತ್ತದೆ. ನಗರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಈ ಕಾಯಿಲೆಯಿಯಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗಿರುವುದು ತಿಳಿದು ಬಂದಿದೆ.

ಬೌರಿಂಗ್ ಹಾಗೂ ಲೇಡಿ ಕರ್ಜನ್ ಆಸ್ಪತ್ರೆಗಳಲ್ಲಿ ಹಲವು ಮಂದಿ ಈ ಹಂತದ ಡೆಂಗೆಯಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಸಹ ರೋಗಿಗಳ ಸಂಖ್ಯೆ ಈವರೆಗೆ ಸಮರ್ಪಕವಾಗಿ ಲಭ್ಯವಾಗಿಲ್ಲ. ಮಕ್ಕಳು ಈ ಕಾಯಿಲೆಗೆ ತುತ್ತಾಗಿದ್ದರೂ, ಡೆಂಗೆಯ ವೈರಾಣು ಜ್ವರವೆಂದು ಭಾವಿಸಿ ಚಿಕಿತ್ಸೆ ಪಡೆಯಲಾಗುತ್ತಿದೆ. ಹಾಗಾಗಿ ಆರಂಭಿಕ ಹಂತದಲ್ಲಿ ನೋವುಣ್ಣುವ ಮಕ್ಕಳು ನಂತರ ತೀವ್ರತರದ ಆರೋಗ್ಯದ ತೊಂದರೆಗಳನ್ನು ಅನುಭವಿಸುತ್ತಾರೆ.

ರಕ್ತದಲ್ಲಿ ಪ್ಲೆಟ್‌ಲೆಟ್ ಎಂಬ ಅಂಶ ಕಡಿಮೆಯಾಗುವುದು ಎಲ್ಲ ಅಪಾಯಗಳಿಗೆ ಮೂಲಕಾರಣ. ಪ್ಲೆಟ್‌ಲೆಟ್  ರಕ್ತಸ್ರಾವವನ್ನು ತಡೆಯುತ್ತವೆ. ಇವುಗಳ ಕೊರತೆಯಿಂದ ವಿವಿಧ ಅಂಗಾಂಗಗಳಿಂದ ರಕ್ತಸ್ರಾವವಾಗುತ್ತದೆ. ಇದರಿಂದ ಅಂಗಾಂಗಗಳ ವೈಫಲ್ಯದ ಸಾಧ್ಯತೆ ಹೆಚ್ಚಿರುತ್ತದೆ.
ಈ ಬಗ್ಗೆ `ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಭಾರತೀಯ ಶಿಶುತಜ್ಞರ ಅಕಾಡೆಮಿಯ ಸದಸ್ಯೆ ಡಾ. ಪ್ರೀತಿ ಗಲಗಲಿ  `ಡೆಂಗೆಯಲ್ಲಿ  ಮೂರು ಬಗೆಯ ಹಂತಗಳಿದೆ.

ಡೆಂಗೆ ಸಾಮಾನ್ಯ ಜ್ವರ, ರಕ್ತಸ್ರಾವ (ಹೆಮ್ರಾಜಿಕ್) ಹಾಗೂ ಡೆಂಗೆ ಶಾಕ್ ಸಿಂಡ್ರೊಮ್. ಮೊದಲ ಹಂತದಲ್ಲಿ ಕಾಣಿಸಿಕೊಳ್ಳುವ ಡೆಂಗೆಯು ನಂತರದ ಹಂತಗಳಲ್ಲಿ ಗಂಭೀರ ಸ್ವರೂಪವನ್ನು ತಾಳುತ್ತದೆ' ಎಂದು ತಿಳಿಸಿದರು.

`ಈ ಹಂತದಲ್ಲಿ ತೀವ್ರ ಸ್ವರೂಪದ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ತೀಕ್ಷ್ಣವಾದ ಜ್ವರದ ಜೊತೆಯಲ್ಲಿ ಒಂದೇ ಸಮನೆ ಕಾಡುವ ಹೊಟ್ಟೆ ನೋವು, ಮೈಯಲ್ಲಿ ತುರಿಕೆ, ಚರ್ಮದ ಮೇಲೆ ದಢಾರದಂತೆ ಸಣ್ಣ ಸಣ್ಣ ಕೆಂಪು ಗುಳ್ಳೆಗಳು ಕಾಣಿಸುತ್ತವೆ. ಮೈಊತ, ವಾಕರಿಕೆ, ವಾಂತಿ, ಭೇದಿ ಉಂಟಾಗಬಹುದು. ಜ್ವರ ಬಂದ 3-5 ದಿನಗಳ ನಂತರ ಮೂಗು ಮತ್ತು ವಸಡಿನಲ್ಲಿ ರಕ್ತಸ್ರಾವದ ಚಿಹ್ನೆಗಳು ಕಂಡುಬರುತ್ತವೆ' ಎಂದು ತಿಳಿಸಿದರು.

`ಈ ಹಂತದಲ್ಲಿ ರಕ್ತವಾಂತಿ ಆಗಬಹುದು. ಡಾಂಬರಿನಂತಹ ಕಪ್ಪು ಮಲ ವಿಸರ್ಜನೆ, ವಿಪರೀತ ಬಾಯಾರಿಕೆ, ನಿಶ್ಶಕ್ತಿಯಿಂದ ಬಳಲುವ ರೋಗಿಯ ಚರ್ಮ ತಣ್ಣಗಾಗಿ ಬಿಳುಚಿಕೊಳ್ಳುತ್ತದೆ.

ರಕ್ತಹೀನತೆ ಮತ್ತು ರಕ್ತದ ಒತ್ತಡ ಕುಸಿಯುವ ಕಾರಣ ರೋಗಿ ಆಘಾತದಿಂದ ಮರಣ ಹೊಂದುತ್ತಾನೆ. ಆದರೆ ಈ ಬಗೆಯ ಹಂತವು ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ' ಎಂದು ಆತಂಕ ವ್ಯಕ್ತಪಡಿಸಿದರು.

ಮಣಿಪಾಲ ಆಸ್ಪತ್ರೆಯ ನಿರ್ದೇಶಕ ಡಾ.ಸುದರ್ಶನ್ ಬಲ್ಲಾಳ್, `ಪ್ರಸಕ್ತ ವರ್ಷದಲ್ಲಿ ಗಂಭೀರ ಸ್ವರೂಪದ ಡೆಂಗೆ ಶಾಕ್‌ಸಿಂಡ್ರೊಮ್ ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಆದರೆ ಇದು ಡೆಂಗೆಯೇ ಎಂಬುದನ್ನು ಅಧಿಕೃತವಾಗಿ ಆರೋಗ್ಯ ಇಲಾಖೆ ನಿರ್ಧರಿಸಬೇಕು' ಎಂದು ಹೇಳಿದರು.

`ಆರೋಗ್ಯವಂತನ ಮನುಷ್ಯ ದೇಹದಲ್ಲಿ 1.5 ರಿಂದ 4.5 ಲಕ್ಷ ಪ್ಲೆಟ್‌ಲೆಟ್ ಇರುತ್ತವೆ. ಜ್ವರದಿಂದ ಬಳಲುತ್ತಿರುವ ಮಕ್ಕಳ ರಕ್ತದಲ್ಲಿನ ಪ್ಲೆಟ್‌ಲೆಟ್‌ಗಳನ್ನು ನಿಯಮಿತವಾಗಿ ತಪಾಸಣೆಗೆ ಒಳಪಡಿಸಬೇಕು. ಇದರ ಸಂಖ್ಯೆ ಇಳಿಮುಖವಾಗುತ್ತಿದ್ದಂತೆ ಅಗತ್ಯವಾಗಿ ಚಿಕಿತ್ಸೆ ಪಡೆಯುವುದೊಂದೇ  ಪರಿಹಾರ' ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.