ADVERTISEMENT

ಬಾಡಿಗೆ ಕ್ಯಾಮೆರಾ ಮಾರುತ್ತಿದ್ದವನ ಸೆರೆ

​ಪ್ರಜಾವಾಣಿ ವಾರ್ತೆ
Published 28 ಮೇ 2018, 19:52 IST
Last Updated 28 ಮೇ 2018, 19:52 IST
ಕಾರ್ತಿಕ್
ಕಾರ್ತಿಕ್   

ಬೆಂಗಳೂರು: ಬೆಲೆಬಾಳುವ ಕ್ಯಾಮೆರಾಗಳನ್ನು ಬಾಡಿಗೆ ಪಡೆದು, ಮಾಲೀಕರಿಗೆ ವಾಪಸ್ ಕೊಡದೆ ಬೇರೆಯವರಿಗೆ ಮಾರಾಟ ಮಾಡುತ್ತಿದ್ದ ಅರೋಪದಡಿ, ಎಂಜಿನಿಯರಿಂಗ್ ಪದವೀಧರ ಕಾರ್ತಿಕ್ ಅಡ್ಡಗರ್ಲ್ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ವಿಶಾಖಪಟ್ಟಣ ನಿವಾಸಿಯಾದ ಕಾರ್ತಿಕ್, ಮೂರು ವರ್ಷಗಳ ಹಿಂದೆ ಪದವಿ ಪೂರ್ಣಗೊಳಿಸಿದ್ದ. ನಂತರ, ಮನೆ ತೊರೆದು ನಗರದಿಂದ ನಗರಕ್ಕೆ ಸುತ್ತಾಡುತ್ತಿದ್ದ. ಗಾಂಧಿನಗರದ ವಸತಿಗೃಹದಲ್ಲಿರುವಾಗಲೇ ನಮಗೆ ಸಿಕ್ಕಿಬಿದ್ದ. ಆತನಿಂದ ₹12.03 ಲಕ್ಷ ಮೌಲ್ಯದ ಕ್ಯಾಮೆರಾ ಹಾಗೂ ಲೆನ್ಸ್‌ಗಳನ್ನು ಜಪ್ತಿ ಮಾಡಿದ್ದೇವೆ’ ಎಂದು ಸಂಪಿಗೆಹಳ್ಳಿ ಪೊಲೀಸರು ತಿಳಿಸಿದರು.

ಸ್ಥಳೀಯ ನಿವಾಸಿ ಲೋಹಿತ್ ಸೊಂಟಕಿ ಎಂಬುವವರು, ₹2.76 ಲಕ್ಷ ಮೌಲ್ಯದ ಕ್ಯಾಮೆರಾ ಹಾಗೂ ₹1.38 ಲಕ್ಷ ಮೌಲ್ಯದ ಲೆನ್ಸ್‌ ಬಾಡಿಗೆಗೆ ಕೊಡುವುದಾಗಿ ‘ರೆಂಟ್‌ಶೇರ್ ಡಾಟ್ ಕಾಮ್’ ಜಾಲತಾಣದಲ್ಲಿ ಜಾಹೀರಾತು ಪ್ರಕಟಿಸಿದ್ದರು. ಅದನ್ನು ನೋಡಿ ಲೋಹಿತ್‌ರನ್ನು ಸಂಪರ್ಕಿಸಿದ್ದ ಆರೋಪಿ, ಕ್ಯಾಮೆರಾ, ಲೆನ್ಸ್‌ ಬಾಡಿಗೆಗೆ ಪಡೆದಿದ್ದ. ನಿಗದಿತ ದಿನ ಕಳೆದರೂ ಅವುಗಳನ್ನು ವಾಪಸ್‌ ಕೊಟ್ಟಿರಲಿಲ್ಲ. ಮೊಬೈಲ್‌ ಸ್ವಿಚ್ ಆಫ್‌ ಮಾಡಿಕೊಂಡು ನಾಪತ್ತೆಯಾಗಿದ್ದ. ಆ ಬಗ್ಗೆ ಲೋಹಿತ್‌ ದೂರು ನೀಡಿದ್ದರು ಎಂದರು.

ADVERTISEMENT

ಐಷಾರಾಮಿ ಜೀವನ: ಆರೋಪಿಯ ತಂದೆ, ವಾಯುಪಡೆಯ ನಿವೃತ್ತ ಅಧಿಕಾರಿ. ತಾಯಿ ಸಹ ಬ್ಯಾಂಕೊಂದರ ನಿವೃತ್ತ ಉದ್ಯೋಗಿ. ಎಂಜಿನಿಯರಿಂಗ್‌ ಪದವಿ ಮುಗಿಸಿದ ಬಳಿಕ ಕಾರ್ತಿಕ್‌ಗೆ ಕೆಲಸ ಸಿಕ್ಕಿರಲಿಲ್ಲ. ಅದರಿಂದಾಗಿ ಆತ ಮನೆ ಬಿಟ್ಟು ಹೋಗಿದ್ದ ಎಂದು ಪೊಲೀಸರು ತಿಳಿಸಿದರು.

‘ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಆರೋಪಿ ಸುತ್ತಾಡುತ್ತಿದ್ದ. ಪಂಚತಾರಾ ಹೋಟೆಲ್‌ಗಳಲ್ಲೇ ನಿತ್ಯವೂ ಉಳಿದುಕೊಳ್ಳುತ್ತಿದ್ದ’ ಎಂದರು.

ಜೂಜಾಟಕ್ಕಾಗಿ ಕೃತ್ಯ: ಪದವಿ ಓದುತ್ತಿದ್ದಾಗಿನಿಂದಲೂ ಆರೋಪಿ ಜೂಜಾಟ ಆಡುತ್ತಿದ್ದ. ಪರೀಕ್ಷಾ ಶುಲ್ಕ ಪಾವತಿಸಬೇಕೆಂದು ಪೋಷಕರಿಂದ ಪದೇ ಪದೇ ಹಣ ಪಡೆದುಕೊಂಡು ಜೂಜಾಟಕ್ಕೆ ಬಳಸುತ್ತಿದ್ದ. ಆ ಬಗ್ಗೆ ಆರೋಪಿಯೇ ಹೇಳಿಕೆ ಕೊಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದರು.

‘ಬಾಡಿಗೆ ಪಡೆದ ಕ್ಯಾಮೆರಾ ಹಾಗೂ ಲೆನ್ಸ್‌ಗಳ ಚಿತ್ರಗಳನ್ನು ಕ್ಲಿಕ್ಕಿಸಿ ‘ಓಎಲ್‌ಎಕ್ಸ್‌’ ಜಾಲತಾಣದಲ್ಲಿ ಪ್ರಕಟಿಸುತ್ತಿದ್ದ. ಗ್ರಾಹಕರು ಸಿಗುತ್ತಿದ್ದಂತೆ, ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದ. ಮುಂಬೈ ಪಶ್ಚಿಮ ಠಾಣೆ, ಗೋರೆಗಾಂವ್ ಠಾಣೆ, ಪಶ್ಚಿಮ ಬಂಗಾಳದ ಹೌರಾ ಠಾಣೆ, ಹೈದರಾಬಾದ್‌ನ ಹುಮಾಯೂನ್ ನಗರ ಠಾಣೆ, ಬಂಜಾರ ಹಿಲ್ಸ್‌ ಠಾಣೆ ವ್ಯಾಪ್ತಿಯಲ್ಲೂ ಕ್ಯಾಮೆರಾ ಮಾಲೀಕರನ್ನು ಆರೋಪಿ ವಂಚಿಸಿದ್ದಾನೆ. ಅಲ್ಲಿಯ ಕೆಲ ಪ್ರಕರಣಗಳಿಗೆ ಸಂಬಂಧಪಟ್ಟ ಕ್ಯಾಮೆರಾ ಹಾಗೂ ಲೆನ್ಸ್‌ಗಳನ್ನೂ ಆರೋಪಿಗಳಿಂದ ಜಪ್ತಿ ಮಾಡಿದ್ದೇವೆ’ ಎಂದರು.

ಗಣಿತದಲ್ಲಿ ಪರಿಣತ; ದಿನಕ್ಕೆ ₹7 ಸಾವಿರ ಗಳಿಕೆ

ಆರೋಪಿ ಕಾರ್ತಿಕ್, ಗಣಿತ ವಿಷಯದಲ್ಲಿ ಪರಿಣತ. ಕೆಲ ಟ್ಯುಟೋರಿಯಲ್‌ಗಳಿಗೆ ಹೋಗಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ. ಅದಕ್ಕೆ ಸಂಭಾವನೆ ಆಗಿ ದಿನವೊಂದಕ್ಕೆ ₹7,000 ಪಡೆಯುತ್ತಿದ್ದ ಎಂದು ಪೊಲೀಸರು ತಿಳಿಸಿದರು.

ಪಾಠದಿಂದ ಬರುತ್ತಿದ್ದ ಹಣ ಖರ್ಚಿಗೆ ಸಾಕಾಗುತ್ತಿರಲಿಲ್ಲ. ಹೀಗಾಗಿಯೇ, ಬಾಡಿಗೆ ಪಡೆದ ಕ್ಯಾಮೆರಾಗಳನ್ನು ಮಾರಾಟ ಮಾಡಿ ಹಣ ಗಳಿಸುತ್ತಿದ್ದ. ಅದನ್ನೇ ಜೂಜಾಟಕ್ಕೆ ಕಟ್ಟುತ್ತಿದ್ದ. ಅದರಲ್ಲೂ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾನೆ ಎಂದರು.

‘ಕಾರ್ತಿಕ್‌ನನ್ನು ಈ ಹಿಂದೆ ಹೈದರಾಬಾದ್ ಪೊಲೀಸರು ಬಂಧಿಸಿದ್ದರು. ಠಾಣೆಗೆ ಹೋಗಿದ್ದ ಪೋಷಕರು, ದೂರುದಾರರಿಗೆ ಕ್ಯಾಮೆರಾ ವಾಪಸ್‌ ಕೊಡಿಸಿ ಮಗನನ್ನು ಬಿಡಿಸಿಕೊಂಡು ಹೋಗಿದ್ದರು. ಅದೇ ರೀತಿ ಆತನಿಂದ ವಂಚನೆಗೀಡಾದ ದೂರುದಾರರಿಗೆ, ಕ್ಯಾಮೆರಾ ಹಾಗೂ ಲೆನ್ಸ್‌ಗಳನ್ನು ವಾಪಸ್‌ ಕೊಡಿಸಲು ಪೋಷಕರು ಇದುವರೆಗೂ ₹40 ಲಕ್ಷದಷ್ಟು ಆಸ್ತಿ ಕಳೆದುಕೊಂಡಿದ್ದಾರೆ. ಪೋಷಕರು ಎಷ್ಟೇ ಕರೆದರೂ ಆತ ಮನೆಗೂ ಹೋಗುತ್ತಿರಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.