ADVERTISEMENT

ಬಾಯಿಗೆ ಮಣ್ಣು ತುಂಬಿ ಮಹಿಳೆ ಕೊಲೆ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 19:59 IST
Last Updated 11 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ಕೋರಮಂಗಲ ಬಿಡಿಎ ವಸತಿ ಸಮುಚ್ಚಯದ ಬಳಿಯ ಖಾಲಿ ನಿವೇಶನದಲ್ಲಿ ದುಷ್ಕರ್ಮಿಗಳು ಮಹಿಳೆಯ ಬಾಯಿಗೆ ಮಣ್ಣು ತುಂಬಿ, ವೈರ್‌ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ.

‘ಕೊಲೆಯಾಗಿರುವ ಮಹಿಳೆಯ ವಯಸ್ಸು ಸುಮಾರು 40 ವರ್ಷ. ಆದರೆ, ಅವರ ಗುರುತು ಪತ್ತೆಯಾಗಿಲ್ಲ. ಅವರ ಎಡಗೈ ಮೇಲೆ ಶಾಂತಮ್ಮ ಎಂದು ಹಚ್ಚೆ ಗುರುತಿದೆ’ ಎಂದು ಆಗ್ನೇಯ ವಿಭಾಗದ ಡಿಸಿಪಿ ಟಿ.ಡಿ.ಪವಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಕರಣದ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ. ಸಿಬ್ಬಂದಿ, ಮೃತ ಮಹಿಳೆಯ ಭಾವಚಿತ್ರವನ್ನು ನಗರದ ಎಲ್ಲಾ ಠಾಣೆಗಳಿಗೂ ರವಾನಿಸಿ ಗುರುತು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತರಾಗಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಶಂಕಾಸ್ಪದ ಸಾವು: ಮಡಿವಾಳ ಬಳಿಯ ಬೃಂದಾವನ ನಗರದಲ್ಲಿ ಮಣಿಯಮ್ಮ  (47) ಎಂಬುವರು ಮಂಗಳವಾರ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಕೋರಮಂಗಲ ಬಿಡಿಎ ವಸತಿ ಸಮುಚ್ಚಯದ ಸಮೀಪ ದುಷ್ಕರ್ಮಿ­ಗಳು ಮಹಿಳೆ­ಯೊಬ್ಬರನ್ನು ಕೊಲೆ ಮಾಡಿದ್ದಾರೆ. ಕೇರಳ ಮೂಲದ ಮಣಿಯಮ್ಮ, ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದು ಮಗ–ಸೊಸೆ ಜತೆ ವಾಸ ವಾಗಿದ್ದರು. ಹಬ್ಬದ ಸಲುವಾಗಿ ಮಗ–ಸೊಸೆ ಊರಿಗೆ ಹೋಗಿದ್ದರಿಂದ ಅವರೊಬ್ಬರೇ ಮನೆಯಲ್ಲಿದ್ದರು.

ಬುಧವಾರ ಬೆಳಿಗ್ಗೆ ಮನೆಯ ಮುಂಭಾಗದಲ್ಲಿ ಅವರ ಶವ ಪತ್ತೆಯಾಗಿದೆ. ಈ ಬಗ್ಗೆ ಸ್ಥಳೀಯರು ಅದೇ ಬಡಾವಣೆಯಲ್ಲಿರುವ ಮಣಿಯಮ್ಮನ ಮತ್ತೊಬ್ಬ ಮಗಳು ಪ್ರಿಯಾ ಅವರಿಗೆ ವಿಷಯ ತಿಳಿಸಿದ್ದಾರೆ ಎಂದು ಮಡಿವಾಳ ಪೊಲೀಸರು ಹೇಳಿದ್ದಾರೆ. ‘ಮಣಿಯಮ್ಮನ ತಲೆ ಮೇಲೆ ಗಾಯದ ಗುರುತುಗಳಿವೆ. ಅಲ್ಲದೇ, ದೇಹದ ಮೇಲೆ ತರಚಿದ ಗಾಯಗಳಾಗಿವೆ. ಘಟನೆ ಸಂಬಂಧ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

’ಕೋರಮಂಗಲದ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ತಾಯಿಗೆ ಪ್ರತಿ ತಿಂಗಳು 10ನೇ ತಾರೀಖು ಸಂಬಳ ಬರುತ್ತಿತ್ತು. ಅದೇ ರೀತಿ ಮಂಗಳವಾರ ಸಂಬಳ ಬಂದಿತ್ತು. ಈ ಸಂಗತಿ ತಿಳಿದಿದ್ದ ವ್ಯಕ್ತಿಗಳೇ ತಾಯಿಯನ್ನು ಕೊಲೆ ಮಾಡಿ ಹಣ ದೋಚಿದ್ದಾರೆ. ಅಲ್ಲದೇ ತಾಯಿಯ ಮೇಲೆ ಅತ್ಯಾಚಾರ ನಡೆದಿರುವ ಸಾಧ್ಯತೆ ಇದೆ’ ಎಂದು ಪ್ರಿಯಾ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.