ADVERTISEMENT

ಬಿಎಂಐಸಿ ಯೋಜನೆ ವ್ಯಾಪ್ತಿ ಸರ್ಕಾರದಲ್ಲಿ ಇನ್ನೂ ನಿರ್ದಿಷ್ಟ ಮಾಹಿತಿ ಇಲ್ಲ

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 19:30 IST
Last Updated 15 ಜೂನ್ 2011, 19:30 IST

ಬೆಂಗಳೂರು: ಆರಂಭವಾಗಿ 15 ವರ್ಷಗಳು ಕಳೆದಿದ್ದರೂ `ವಿವಾದಿತ~ ಬೆಂಗಳೂರು- ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (ಬಿಎಂಐಸಿ) ಯೋಜನೆಯ ಅನುಷ್ಠಾನ ವಿವರಗಳ ಬಗ್ಗೆ ತನ್ನಲ್ಲಿ ನಿರ್ದಿಷ್ಟ ಮಾಹಿತಿ ಇಲ್ಲ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ.

ಯೋಜನೆಗೆ ಸಂಬಂಧಿಸಿದ ಲಿಂಕ್‌ರಸ್ತೆ, ಪೆರಿಫೆರಲ್ ರಸ್ತೆ, ಎಕ್ಸ್‌ಪ್ರೆಸ್ ವೇ, ಟೋಲ್ ಪ್ಲಾಜಾ ಮತ್ತು ಐದು ಟೌನ್‌ಶಿಪ್‌ಗಳಿಗೆ ಉದ್ದೇಶಿಸಲಾದ 20,193 ಎಕರೆ ವಿಸ್ತೀರ್ಣದ ಜಮೀನಿನ ಸರ್ವೆ ನಂಬರ್, ಗ್ರಾಮ, ವಿಸ್ತೀರ್ಣ, ಯೋಜನಾ ಪ್ರದೇಶದ ಎಲ್ಲೆಗಳನ್ನು ಒಳಗೊಂಡ ನಕ್ಷೆ ಮತ್ತು ವಿವರಗಳು ಲಭ್ಯವಿಲ್ಲ ಎಂದು ಈ ಯೋಜನೆಯ ಅನುಷ್ಠಾನದ ಹೊಣೆ ಹೊತ್ತಿರುವ ಲೋಕೋಪಯೋಗಿ ಇಲಾಖೆ ತಿಳಿಸಿದೆ.

1997ರಲ್ಲಿ ಮಾಡಲಾದ ಮೂಲ ಒಪ್ಪಂದ ಮತ್ತು 2004ರಲ್ಲಿ ಆದ ಸ್ಥೂಲ ಅಭಿವೃದ್ಧಿ ಯೋಜನೆಗಳಲ್ಲಿ (ಒಡಿಪಿ) ಬಿಎಂಐಸಿಗೆ ಬೇಕಾದ ಭೂಮಿಯ ಗಡಿ ಕುರಿತು ಪ್ರಸ್ತಾಪ ಇಲ್ಲ. ಆದರೆ, ಈ ಯೋಜನೆ ಕಾಮಗಾರಿಯ ಗುತ್ತಿಗೆ ಪಡೆದುಕೊಂಡಿರುವ ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ (ನೈಸ್) ಸಂಸ್ಥೆಗೆ ಸರ್ಕಾರ ಈಗಾಗಲೇ 6,400 ಎಕರೆ ಭೂಮಿ ಹಸ್ತಾಂತರಿಸಿದೆ.

ಯೋಜನೆಯ ಮೊದಲ ಹಂತದ (41 ಕಿ.ಮೀ. ವರ್ತುಲ ರಸ್ತೆ, 9.8 ಕಿ.ಮೀ. ಲಿಂಕ್ ರಸ್ತೆ, 13 ಕಿ.ಮೀ. ಎಕ್ಸ್‌ಪ್ರೆಸ್ ರಸ್ತೆ ಮತ್ತು ಒಂದು ಟೌನ್‌ಶಿಪ್) ಹೆಚ್ಚಿನ ಕಾಮಗಾರಿಗಳು ಮುಗಿದಿವೆ. ನೈಸ್ ಸಂಸ್ಥೆಗೆ ಹಸ್ತಾಂತರಿಸಬೇಕಿರುವ ಬಿಡದಿ ಬಳಿಯ 1,916 ಎಕರೆ ಭೂಮಿಗೆ ಪರಿಹಾರ ಮೊತ್ತವನ್ನು ರಾಜ್ಯ ಸಚಿವ ಸಂಪುಟ ಇತ್ತೀಚಿಗಷ್ಟೇ ನಿಗದಿಪಡಿಸಿದೆ.

ಬಿಎಂಐಸಿ ಯೋಜನಾ ಪ್ರಾಧಿಕಾರ ಈ ಯೋಜನೆ ಕುರಿತು ವಿಸ್ತೃತ ನಕ್ಷೆಯನ್ನು ಒದಗಿಸುವಂತೆ ಇತ್ತೀಚೆಗೆ ಲೋಕೋಪಯೋಗಿ ಇಲಾಖೆಯನ್ನು ಕೋರಿದಾಗ, ಈ ದಾಖಲೆಗಳು ಇಲಾಖೆ ಬಳಿ ಇಲ್ಲದಿರುವ ವಿಚಾರ ಬೆಳಕಿಗೆ ಬಂದಿದೆ. ಈ ಮಾಹಿತಿಗಳನ್ನು ಬಿಎಂಐಸಿ ಸ್ಥಳೀಯ ಯೋಜನಾ ಪ್ರಾಧಿಕಾರ 2015ನೇ ಇಸವಿಗಾಗಿ ಸಿದ್ಧಪಡಿಸುತ್ತಿರುವ ತನ್ನ ಮಾಸ್ಟರ್ ಪ್ಲ್ಯಾನ್‌ನಲ್ಲಿ (ಅಥವಾ ಸ್ಥೂಲ ಅಭಿವೃದ್ಧಿ ಯೋಜನೆ) ಬಳಸಿಕೊಳ್ಳಬೇಕಿದೆ.

ಯೋಜನೆ ಅನುಷ್ಠಾನಗೊಳ್ಳುತ್ತಿರುವ ಪ್ರದೇಶಗಳ ಸರ್ವೆ ಸಂಖ್ಯೆಯನ್ನು ಬಿಎಂಐಸಿ ಸ್ಥಳೀಯ ಯೋಜನಾ ಪ್ರಾಧಿಕಾರ ತನ್ನ ಮಾಸ್ಟರ್ ಪ್ಲ್ಯಾನ್‌ನೊಂದಿಗೆ ತಾಳೆ ಮಾಡಿ ನೋಡಬೇಕು. ಯೋಜನಾ ಪ್ರದೇಶದ ಸರ್ವೆ ಸಂಖ್ಯೆಗಳು ಸರಿಯಾಗಿ ಲಭ್ಯವಾದಾಗ ಮಾತ್ರ ಪ್ರಾಧಿಕಾರಕ್ಕೆ ತನ್ನ ವ್ಯಾಪ್ತಿಯಲ್ಲಿ ಬರುವ ಬೆಂಗಳೂರು ನಗರ, ರಾಮನಗರ, ಮಂಡ್ಯ ಮತ್ತು ಮೈಸೂರಿನಲ್ಲಿ ಯೋಜನೆ ಮತ್ತು ಅಭಿವೃದ್ಧಿ ಕಾರ್ಯಕ್ರಮ ಸಮರ್ಪಕವಾಗಿ ನಡೆಯುವಂತೆ ಮಾಡಲು ಸಾಧ್ಯ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈಗಿರುವ ಸ್ಥೂಲ ಅಭಿವೃದ್ಧಿ ಯೋಜನೆಯನ್ನು (ಒಡಿಪಿ) 2004ರಲ್ಲಿ ಸಿದ್ಧಪಡಿಸಲಾಗಿತ್ತು, ಇದರ ಪರಿಷ್ಕರಣೆ ಕೆಲಸವನ್ನು ನಗರ ಮತ್ತು ಗ್ರಾಮೀಣ ಮೂಲಸೌಕರ್ಯ ಯೋಜನಾ ಕೇಂದ್ರಕ್ಕೆ (ಸಿಯುಆರ್‌ಐಪಿ) ವಹಿಸಲಾಗಿದೆ. ಯೋಜನೆಯ ವಿಸ್ತೃತ ವಿವರಗಳನ್ನು ಕೋರಿ ಬಿಎಂಐಸಿ ಸ್ಥಳೀಯ ಯೋಜನಾ ಪ್ರಾಧಿಕಾರವು ಲೋಕೋಪಯೋಗಿ ಇಲಾಖೆಗೆ ಇದೇ ಮಾರ್ಚ್ 21ರಂದು ಪತ್ರ ಬರೆದಿತ್ತು. ಇದಕ್ಕೆ ಉತ್ತರಿಸಿರುವ ಇಲಾಖೆ, ತನ್ನ ಬಳಿ 2002ರಲ್ಲಿ ಅನುಮೋದನೆ ಪಡೆದ ಸ್ಥೂಲ ನಕ್ಷೆ ಇದೆ. ಆದರೆ ಈ ಕುರಿತ ಸೂಕ್ಷ್ಮ ವಿವರಗಳು ಇಲ್ಲ ಎಂದು ತಿಳಿಸಿದೆ.

ಅಲ್ಲದೆ, ಯೋಜನೆಗೆ ಭೂಮಿ ವಶಪಡಿಸಿಕೊಳ್ಳಲು ರಾಜ್ಯ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಅಗತ್ಯ ಪ್ರಮಾಣ ಪತ್ರವನ್ನೂ ನೀಡಲಾಗಿಲ್ಲ ಎಂದು ಇಲಾಖೆ ತಿಳಿಸಿದೆ. ಒಡಿಪಿಯ ಪರಿಷ್ಕರಣೆಯನ್ನು ಪೂರ್ಣಗೊಳಿಸಬೇಕಾದ ಬಿಎಂಐಸಿ ಪ್ರದೇಶ ಯೋಜನಾ ಪ್ರಾಧಿಕಾರ ಭೂಮಿಯ ವಿವರ ಕೋರಿ ಕೆಐಎಡಿಬಿಗೂ ಪತ್ರ ಬರೆದಿತ್ತು. ಯೋಜನೆಗೆ ಅಗತ್ಯವಿರುವ ಭೂಮಿಯ ಸರ್ವೆ ಮುಗಿದ ನಂತರವಷ್ಟೆ ಈ ವಿವರಗಳನ್ನು ನೀಡಲು ಸಾಧ್ಯ ಎಂದು ಬಿಎಂಐಸಿ ಸ್ಥಳೀಯ ಯೋಜನಾ ಪ್ರಾಧಿಕಾರಕ್ಕೆ ಕೆಐಎಡಿಬಿ ಉತ್ತರ ನೀಡಿದೆ.

ಉಪಗ್ರಹ ಚಿತ್ರಗಳನ್ನು ಆಧರಿಸಿ ಸಿಯುಆರ್‌ಐಪಿ ಸಿದ್ಧಪಡಿಸಿದ ಯೋಜನೆಗೆ ಅನುಮೋದನೆ ನೀಡುವಂತೆ ಬಿಎಂಐಸಿ ಸ್ಥಳೀಯ ಯೋಜನಾ ಪ್ರಾಧಿಕಾರ ಲೋಕೋಪಯೋಗಿ ಇಲಾಖೆಯನ್ನು ಕೋರಿತ್ತು. ಆದರೆ ಈ ಮನವಿಗೆ ಇಲಾಖೆಯಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.

ಲೋಕೋಪಯೋಗಿ ಇಲಾಖೆಯ ಬಳಿ ಎಲ್ಲ ಮಾಹಿತಿಗಳೂ ಇವೆ. ಆದರೆ ಕಾನೂನು ಸಮಸ್ಯೆ ಎದುರಿಸಬೇಕಾದ ಪರಿಸ್ಥಿತಿ ಬರಬಹುದು ಎಂಬ ಕಾರಣದಿಂದ ಅದು ಮಾಹಿತಿ ನೀಡುತ್ತಿಲ್ಲ ಎಂದು ಮೂಲಗಳು ಹೇಳುತ್ತವೆ. ಅಲ್ಲದೆ, ಯೋಜನೆ ತಯಾರಿಕೆಯಲ್ಲಿ ತನ್ನ ಕೆಲವು ದೋಷಗಳೂ ಇದರಿಂದ ಹೊರಬೀಳಬಹುದು ಎಂಬ ಭಯ ಇಲಾಖೆಗೆ ಇದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.