ADVERTISEMENT

ಬಿಎಂಟಿಸಿಯ ಗುಜರಿ ಬಸ್‌ ಕೇಳುವವರಿಲ್ಲ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 20:33 IST
Last Updated 27 ಅಕ್ಟೋಬರ್ 2017, 20:33 IST
ಬಿಎಂಟಿಸಿಯ ಗುಜರಿ ಬಸ್‌ ಕೇಳುವವರಿಲ್ಲ
ಬಿಎಂಟಿಸಿಯ ಗುಜರಿ ಬಸ್‌ ಕೇಳುವವರಿಲ್ಲ   

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಪರಿಣಾಮ ಬಿಎಂಟಿಸಿಗೂ ತಟ್ಟಿದೆ. ಗುಜರಿಗೆ ಸೇರಿರುವ 800 ಬಸ್‌ಗಳ ಖರೀದಿಗೆ ಗುಜರಿಯವರು ಮುಂದೆ ಬರುತ್ತಿಲ್ಲ. ಗುಜರಿ ವಸ್ತುಗಳ ಮೇಲೆ ಶೇ 28ರಷ್ಟು ತೆರಿಗೆ ವಿಧಿಸಿರುವುದೇ ಇದಕ್ಕೆ ಕಾರಣ.

ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ, ‘ಬಿಎಂಟಿಸಿಯಲ್ಲಿ 9 ಲಕ್ಷ ಕಿ.ಮೀ. ಓಡಿದ 800 ಬಸ್‌ಗಳಿವೆ. ಅವುಗಳನ್ನು ಗುಜರಿಯವರಿಗೆ ಮಾರಾಟ ಮಾಡಬೇಕು. ಆದರೆ, ನೋಟು ರದ್ದತಿ ಹಾಗೂ ಜಿಎಸ್‌ಟಿ ಜಾರಿಯಿಂದಾಗಿ ಗುಜರಿ ಬಸ್‌ ಹಾಗೂ ಬಿಡಿಭಾಗಗಳನ್ನು ಖರೀದಿಸುವವರು ಕಡಿಮೆ ಆಗಿದ್ದಾರೆ. ಈ ಹಿಂದೆ ಗುಜರಿ ವಸ್ತುಗಳ ಮೇಲೆ ಶೇ 5ರಷ್ಟು ತೆರಿಗೆ ಇತ್ತು. ಈಗ ಅದು ಹೆಚ್ಚಾಗಿದೆ’ ಎಂದು ಹೇಳಿದರು.

‘ಸದ್ಯ ಗುಜರಿ ಬಸ್‌ಗಳನ್ನು ಡಿಪೊಗಳಲ್ಲಿ ನಿಲ್ಲಿಸಲಾಗಿದೆ. ಇದರಿಂದಾಗಿ ಬಸ್‌ಗಳ ರಿಪೇರಿ ಮಾಡಲು ಜಾಗ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಚಲ್ಲಘಟ್ಟ ಕಾರ್ಯಾಗಾರಕ್ಕೆ 100 ಗುಜರಿ ಬಸ್‌ಗಳನ್ನು ಸ್ಥಳಾಂತರಿಸಲು ನಿರ್ಧರಿಸಿದ್ದೆವು. ಆದರೆ, ಬಿಎಂಟಿಸಿಗೆ ಸೇರಿದ ಸಾವಿರ ಎಕರೆಗೂ ಹೆಚ್ಚಿನ ಜಾಗವಿದೆ. ಈ ಜಾಗದಲ್ಲೇ ಎರಡು ಕಡೆಗಳಲ್ಲಿ ಡಂಪಿಂಗ್‌ ಯಾರ್ಡ್‌ ಸ್ಥಾಪಿಸಿ, ಗುಜರಿ ಬಸ್‌ಗಳನ್ನು ತಾತ್ಕಾಲಿಕವಾಗಿ ನಿಲುಗಡೆ ಮಾಡಲು ನಿರ್ಧರಿಸಿದ್ದೇವೆ’ ಎಂದು ತಿಳಿಸಿದರು.

ADVERTISEMENT

‘ಸಂಚಾರ ದಟ್ಟಣೆಯನ್ನು ತಗ್ಗಿಸುವ ಉದ್ದೇಶದಿಂದ ಪೀಣ್ಯದ ಬಸವೇಶ್ವರ ಬಸ್‌ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳು ಕಾರ್ಯಾಚರಣೆ ನಡೆಸಲಿವೆ. ಬಸ್‌ ನಿಲ್ದಾಣದಿಂದ ಮೆಟ್ರೊ ನಿಲ್ದಾಣಕ್ಕೆ ಫೀಡರ್‌ ಬಸ್‌ಗಳು ಸಂಚರಿಸಲಿವೆ. ಕೋಲಾರ, ಮಾಲೂರು, ಚಿಂತಾಮಣಿ, ಚೆನ್ನೈ ಕಡೆಗೆ ಹೋಗುವ ವಾಹನಗಳು ಕೆ.ಆರ್‌.ಪುರದಿಂದ ಸಂಚಾರ ಮಾಡಲಿವೆ. ಇದಕ್ಕಾಗಿ ಜಾಗವನ್ನು ಹುಡುಕುತ್ತಿದ್ದೇವೆ’ ಎಂದರು.

‘ವೋಲ್ವೊ ಬಸ್‌ಗಳ ಪೈಕಿ ಶೇ 90ರಷ್ಟು ಬಸ್‌ಗಳು ಕೆಟ್ಟುನಿಂತಿವೆ. ರಿಪೇರಿಗಾಗಿ ಕಂಪೆನಿಯ ತಂತ್ರಜ್ಞರನ್ನು ಕರೆಸಿದ್ದೇವೆ. ಶೀಘ್ರದಲ್ಲೇ ಅವು ಕಾರ್ಯಾರಂಭ ಮಾಡಲಿವೆ. ಮುಂದಿನ ತಿಂಗಳು 400 ಹೊಸ ಬಸ್‌ಗಳನ್ನು ಲೋಕಾರ್ಪಣೆ ಮಾಡುತ್ತೇವೆ’ ಎಂದು ಹೇಳಿದರು.

‘ಎಲೆಕ್ಟ್ರಿಕ್‌ ಬಸ್‌ಗಳ ಖರೀದಿ ಬಗ್ಗೆ ಕೇಂದ್ರ ಸಾರಿಗೆ ಸಚಿವರೊಂದಿಗೆ ಚರ್ಚಿಸಲು ನವೆಂಬರ್‌ 10ರಂದು ದೆಹಲಿಗೆ ಹೋಗಲಿದ್ದೇನೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಲ್ಲಿ ಈ ಬಸ್‌ಗಳನ್ನು ಖರೀದಿಸಲಿದ್ದೇವೆ. ಈ ಬಸ್‌ಗಳ ಬೆಲೆ ₹2 ಕೋಟಿಯಿಂದ ₹3 ಕೋಟಿ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ನಿಖರವಾಗಿ ಗೊತ್ತಿಲ್ಲ. ಈ ಕುರಿತು ಕೇಂದ್ರ ಸಚಿವರೊಂದಿಗೆ ಚರ್ಚಿಸುತ್ತೇನೆ’ ಎಂದರು.

‘ವಿದ್ಯಾರ್ಥಿಗಳು, ಸ್ವಾತಂತ್ರ್ಯ ಹೋರಾಟಗಾರರು, ಅಂಗವಿಕಲರ ಪಾಸ್‌ಗಳಿಗೆ ಸರ್ಕಾರವು ಶೇ 50ರಷ್ಟು ಅನುದಾನ ನೀಡಲಿದೆ. ಆದಷ್ಟು ಶೀಘ್ರದಲ್ಲೇ ಈ ಹಣ ಇಲಾಖೆಗೆ ಬರಲಿದೆ. ವಿದ್ಯಾರ್ಥಿ ಪಾಸ್‌ಗಳನ್ನು ಶಾಲೆಗೆ ಹೋಗಿ ವಿತರಿಸಲು ಕ್ರಮ ಕೈಗೊಂಡಿದ್ದೇವೆ’ ಎಂದು ತಿಳಿಸಿದರು.

‘ಮಾರ್ಕೊಪೋಲೊ ಬಸ್‌ಗಳ ಖರೀದಿಯಿಂದ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿಗೆ ಆಗಿರುವ ನಷ್ಟದ ಕುರಿತು ತನಿಖೆ ನಡೆಸಲಾಗಿದೆ. ಅದರ ಕಡತವನ್ನು ತರಿಸಿಕೊಂಡು ಪರಿಶೀಲಿಸುತ್ತೇನೆ. ಡಬ್ಬಲ್‌ ಡೆಕ್ಕರ್‌ ಬಸ್‌ಗಳ ಖರೀದಿ ಪ್ರಕ್ರಿಯೆ ಚಾಲನೆಯಲ್ಲಿದೆ’ ಎಂದು ಹೇಳಿದರು.

ಅಂಕಿ–ಅಂಶ

6,430‌ -ಬಿಎಂಟಿಸಿಯಲ್ಲಿರುವ ಒಟ್ಟು ಬಸ್‌ಗಳು

500 -ಡಿಸೆಂಬರ್‌ ವೇಳೆಗೆ ಮತ್ತೆ ಗುಜರಿಗೆ ಸೇರಲಿರುವ ಬಸ್‌ಗಳು

1,500 -ಬಿಎಂಟಿಸಿ ಖರೀದಿಸಲಿರುವ ಹೊಸ ಬಸ್‌ಗಳು

ತಪಾಸಣೆ ವೇಳೆ ಚಿತ್ರೀಕರಣ

‘ಬಿಎಂಟಿಸಿ ಬಸ್‌ ನಿರ್ವಾಹಕರು ಹಾಗೂ ತಪಾಸಣಾ ಅಧಿಕಾರಿಗಳ ನಡುವಿನ ಸಂಘರ್ಷವನ್ನು ತಪ್ಪಿಸುವ ಉದ್ದೇಶದಿಂದ ತಪಾಸಣೆ ವೇಳೆ ಚಿತ್ರೀಕರಣ ಮಾಡಲಾಗುತ್ತದೆ. ತಪಾಸಣಾ ಸಿಬ್ಬಂದಿಗೆ ಕ್ಯಾಮೆರಾ ನೀಡಲಿದ್ದು, ಅವರು ಚಿತ್ರೀಕರಿಸಲಿದ್ದಾರೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಪೊನ್ನುರಾಜ್ ತಿಳಿಸಿದರು.

‘ಸಾವಿರ ಬಸ್‌ಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ’

‘ಸುರಕ್ಷತೆಯ ಉದ್ದೇಶದಿಂದ 800 ಬಸ್‌ಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿದ್ದೇವೆ. ಮತ್ತೆ 1,000 ಬಸ್‌ಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಕೆಗೆ ಮುಂದಾಗಿದ್ದೇವೆ. ಹಂತಹಂತವಾಗಿ ಎಲ್ಲ ಬಸ್‌ಗಳಲ್ಲಿ ಇವುಗಳನ್ನು ಅಳವಡಿಸುತ್ತೇವೆ. ಹೊಸದಾಗಿ ಖರೀದಿಸುವ ಬಸ್‌ಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳ ಅಳವಡಿಕೆಯನ್ನು ಕಡ್ಡಾಯ ಮಾಡಿದ್ದೇವೆ’ ಎಂದು ರೇವಣ್ಣ ತಿಳಿಸಿದರು.

100 ಸಿ.ಸಿ.ಗಿಂತ ಕಡಿಮೆ ಸಾಮರ್ಥ್ಯದ ದ್ವಿಚಕ್ರ ವಾಹನದ ನೋಂದಣಿ ನಿಷೇಧದಿಂದ ಜನರಿಗೆ ತೊಂದರೆ ಆಗಿದೆ. ಕರ್ನಾಟಕ ಮೋಟಾರು ವಾಹನ ನಿಯಮ 143(3)ಕ್ಕೆ ತಿದ್ದುಪಡಿ ತರುತ್ತೇವೆ.
–ಎಚ್‌.ಎಂ.ರೇವಣ್ಣ, ಸಾರಿಗೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.