ADVERTISEMENT

ಬಿಎಂಟಿಸಿ ಚಾಲಕ ಸೇವೆಯಿಂದ ವಜಾ

ಯುವತಿಯೊಂದಿಗೆ ಅನುಚಿತ ವರ್ತನೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 19:33 IST
Last Updated 17 ಮಾರ್ಚ್ 2014, 19:33 IST

ಬೆಂಗಳೂರು:  ಉತ್ತರಪ್ರದೇಶ ಮೂಲದ ಯುವತಿಯೊಂದಿಗೆ ಅನುಚಿ ತವಾಗಿ ವರ್ತಿಸಿದ ಆರೋಪ ಎದುರಿ ಸುತ್ತಿರುವ ಬಿಎಂಟಿಸಿ ಬಸ್‌ ಚಾಲಕ ಸಿದ್ದಾರ್ಥ್‌ನನ್ನು ಸೋಮವಾರ ಸೇವೆಯಿಂದ ವಜಾಗೊಳಿಸಲಾಗಿದೆ.

‘ಹಣ ಪಡೆದು ಟಿಕೆಟ್ ನೀಡದ ಕೆಲವು ದೂರುಗಳು ಸಿದ್ದಾರ್ಥ್‌ ವಿರುದ್ಧ ಇದ್ದವು. ಮಾ.13ರಂದು ಉತ್ತರಪ್ರದೇಶ ಮೂಲದ ಯುವತಿ ಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪವೂ ಆತನ ವಿರುದ್ಧ ಕೇಳಿ ಬಂದಿದ್ದರಿಂದ ಸೇವೆಯಿಂದ ವಜಾ­ಗೊಳಿ­ಸಲಾಗಿದೆ’ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘2008ರಲ್ಲಿ ಸೇವೆಗೆ ಸೇರಿದ್ದ ಆತನ ವಿರುದ್ಧ ಆಗಾಗ್ಗೆ ದೂರುಗಳು ಕೇಳಿಬರುತ್ತಿದ್ದವು. ಹಣ ಪಡೆದು ಟಿಕೆಟ್ ನೀಡದ ಸಂಬಂಧ 10ಕ್ಕೂ ಹೆಚ್ಚು ದೂರುಗಳು ಬಂದಿದ್ದವು. ಅಲ್ಲದೇ, ಪೀಣ್ಯ ಡಿಪೊದ ಸಹಾಯಕ ಸಂಚಾರ ಅಧಿಕಾರಿಯೊಂದಿಗೆ ಅನು­ಚಿತವಾಗಿ ವರ್ತಿಸಿದ ಆರೋಪವೂ ಆತನ ಮೇಲಿತ್ತು’ ಎಂದು ಅವರು ಹೇಳಿದ್ದಾರೆ.

‘ಸಾಮಾನ್ಯವಾಗಿ ಸೇವೆಗೆ ಸೇರಿ ಎರಡು ವರ್ಷ ಕಳೆದ ಬಳಿಕ ಸಿಬ್ಬಂದಿ ಸೇವೆಯನ್ನು ಕಾಯಂಗೊಳಿಸ­ಲಾಗು ತ್ತದೆ.
ಆದರೆ, ಸಿದ್ದಾರ್ಥ್‌ ವಿರುದ್ಧ ದೂರುಗಳು ಹೆಚ್ಚಾಗಿದ್ದರಿಂದ ಸೇವೆ ಕಾಯಂಗೊಳಿ ಸಲಾಗಿರಲಿಲ್ಲ. ಆತ ನನ್ನು ತರಬೇತಿ ಅವಧಿಯಲ್ಲೇ ಉಳಿಸ ಲಾಗಿತ್ತು’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆರೋಪಿ ಸಿದ್ದಾರ್ಥ್‌ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಚಿಕಿತ್ಸೆಗೆ ಸ್ಪಂದಿಸುತ್ತಿರುವ ಯುವತಿ
ಚಾಲಕ ಸಿದ್ದಾರ್ಥ್‌ನಿಂದ ಹಲ್ಲೆಗೊಳಗಾಗಿ ನಗರದ ಕಿಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಉತ್ತರ ಪ್ರದೇಶ ಮೂಲದ ಯುವತಿಯ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ.

ತೀವ್ರ ನಿಗಾ ಘಟಕದಿಂದ ವಿಶೇಷ ವಾರ್ಡ್‌ಗೆ ಅವರನ್ನು ಸೋಮವಾರ ಸ್ಥಳಾಂತರ ಮಾಡಲಾಗಿದೆ. ಯುವತಿಗೆ ಚಿಕಿತ್ಸೆ ನೀಡುತ್ತಿರುವ ಕಿಮ್ಸ್‌ ಆಸ್ಪತ್ರೆಯ ನರರೋಗತಜ್ಞ ಡಾ.ಸುರೇಶ್‌, ‘ಯುವತಿಯ ತಲೆಗೆ ತೀವ್ರ ಪೆಟ್ಟಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ನಿರಂತರ ನಿಗಾ ವಹಿಸಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ತಲೆಗೆ ಪೆಟ್ಟು ಬಿದ್ದಿದ್ದರಿಂದ ಮಿದುಳಿನ ಮುಂಭಾಗಕ್ಕೆ ತೀವ್ರವಾದ ಹಾನಿಯಾಗಿದ್ದು, ರಕ್ತ ಹೆಪ್ಪುಗಟ್ಟಿರುವುದು ಸ್ಕ್ಯಾನಿಂಗ್‌ ವರದಿಯಿಂದ ತಿಳಿದುಬಂದಿದೆ. ಇದಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಹೇಳಿದರು.

‘ಯುವತಿ ಬಸ್ಸಿನಿಂದ ಕೆಳಗೆ ಬಿದ್ದಿರುವುದರಿಂದ ದೇಹದಲ್ಲಿ ಸಣ್ಣ ಪುಟ್ಟ ತರಚು ಗಾಯಗಳಾಗಿವೆ. ಅವರು ಮೂರರಿಂದ ನಾಲ್ಕು ವಾರಗಳ ಕಾಲ ಚಿಕಿತ್ಸೆ ಪಡೆಯುವ ಅಗತ್ಯವಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT