ADVERTISEMENT

ಬಿಎಂಟಿಸಿ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 19:40 IST
Last Updated 13 ಡಿಸೆಂಬರ್ 2012, 19:40 IST

ಬೆಂಗಳೂರು: ನೌಕರರ ವೇತನ ಹೆಚ್ಚಳ ಸೇರಿದಂತೆ ಅನೇಕ ಭರವಸೆಗಳನ್ನು ನೀಡಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ತಾನು ನೀಡಿದ್ದ ಭರವಸೆಗಳನ್ನು ಮರೆತಿದೆ ಎಂದು ಆರೋಪಿಸಿ ಬಿಎಂಟಿಸಿ ಕಾರ್ಮಿಕರ ಸಂಘದ ಸದಸ್ಯರು ಶಾಂತಿನಗರದಲ್ಲಿರುವ ಸಂಸ್ಥೆಯ ಕೇಂದ್ರ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

`ಈ ಹಿಂದೆ ಮುಷ್ಕರ ನಡೆಸಿದ್ದ ವೇಳೆ ಈಗಿರುವ ವೇತನದ ಮೇಲೆ ಶೇ 30ರಷ್ಟು ಹೆಚ್ಚಳ ಮಾಡುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ, ಈಗ ಕೇವಲ ಹತ್ತರಷ್ಟು ಮಾತ್ರ ವೇತನ ಹೆಚ್ಚಳಕ್ಕೆ ಸರ್ಕಾರ ಒಪ್ಪಿದೆ. ಇದರಿಂದ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಇಲ್ಲದಂತಾಗುತ್ತದೆ. ಹಾಗಾಗಿ ಸರ್ಕಾರ ತಾನು ನೀಡಿದ್ದ ಭರವಸೆಯನ್ನು ಉಳಿಸಿಕೊಳ್ಳಬೇಕು. ನೌಕರರಿಗೆ ನ್ಯಾಯಯುತವಾಗಿ ವೇತನ ಹೆಚ್ಚಳ ಮಾಡಬೇಕು' ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

`ಸಂಸ್ಥೆಯ ನೌಕರರ ಕುಟುಂಬಗಳಿಗೆ ಆರೋಗ್ಯ ಭತ್ಯೆ ನೀಡಬೇಕು. ಟ್ರೈನಿ ನೌಕರರ ತರಬೇತಿ ಅವಧಿಯನ್ನು ಆರು ತಿಂಗಳಿಗೆ ಮಿತಿಗೊಳಿಸಿ, ವೇತನವನ್ನು ಕನಿಷ್ಠ ರೂ ಎಂಟು ಸಾವಿರ ನಿಗದಿ ಪಡಿಸಬೇಕು. ಡಿಪೊಗಳಲ್ಲಿ ಕಿರಿಯ ನೌಕರರ ಮೇಲೆ ಹಿರಿಯ ಅಧಿಕಾರಿಗಳು ನಡೆಸುವ ಕಿರುಕುಳಗಳು ತಪ್ಪುವಂತೆ ಕ್ರಮ ಕೈಗೊಳ್ಳಬೇಕು' ಎಂದು ಅವರು   ಆಗ್ರಹ ಪಡಿಸಿದರು.

`ನೌಕರರ ರಜೆ, ಆರೋಗ್ಯ ಸೇವೆಗಳ ಹಣ ಮಂಜೂರಾತಿ ಮತ್ತಿತರರ ಸೌಲಭ್ಯಗಳನ್ನು ಪಡೆಯಲು ಅಧಿಕಾರಿಗಳಿಗೆ ಲಂಚ ನೀಡಬೇಕಾದ ಪರಿಸ್ಥಿತಿ ಇದೆ. ಇದನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು ನೌಕರರ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು' ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.