ADVERTISEMENT

ಬಿಎಸ್‌ವೈ ವಿರುದ್ಧದ 3ನೇ ದೂರು- 30ರಂದು ಆದೇಶ

​ಪ್ರಜಾವಾಣಿ ವಾರ್ತೆ
Published 21 ಜನವರಿ 2012, 19:30 IST
Last Updated 21 ಜನವರಿ 2012, 19:30 IST

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಕೀಲ ಸಿರಾಜಿನ್ ಬಾಷಾ ಸಲ್ಲಿಸಿರುವ ಮೊದಲನೇ ಖಾಸಗಿ ದೂರನ್ನು ವಿಚಾರಣೆಗೆ ಸ್ವೀಕರಿಸಿ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಬೇಕೇ, ಇಲ್ಲವೇ ಎಂಬುದರ ಬಗ್ಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಇದೇ 30ರಂದು ಆದೇಶ ಪ್ರಕಟಿಸಲಿದೆ.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು ಶನಿವಾರ ಈ ಪ್ರಕರಣದ ವಿಚಾರಣೆ ನಡೆಸಿದರು. ದೂರುದಾರರ ವಕೀಲ ನಿತಿನ್ ವಾದ ಮಂಡನೆ ಮುಂದುವರಿಸಿ, `ಈ ಪ್ರಕರಣದಲ್ಲಿ ಲೋಕಾಯುಕ್ತ ಪೊಲೀಸರು ನಡೆಸಿರುವ ತನಿಖಾ ವರದಿ ಆಧರಿಸಿ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಬೇಕು~ ಎಂದು ವಾದಿಸಿದರು.

ದೂರಿನಲ್ಲಿ ಉಲ್ಲೇಖಿಸಿರುವ ಮೂರನೇ ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರ ಇಲ್ಲ ಎಂದು ಲೋಕಾಯುಕ್ತ ಪೊಲೀಸರು ತನಿಖಾ ವರದಿಯಲ್ಲಿ ಅಭಿಪ್ರಾಯಪಟ್ಟಿರುವ ಬಗ್ಗೆಯೂ ನಿತಿನ್ ಆಕ್ಷೇಪ ಸಲ್ಲಿಸಿದರು. ಈ ಆರೋಪದ ಬಗ್ಗೆಯೂ ವಿಚಾರಣೆ ಮುಂದುವರಿಸಬೇಕು.

ಲೋಕಾಯುಕ್ತ ಪೊಲೀಸರು ವರದಿಯಲ್ಲಿ ಸಲ್ಲಿಸಿರುವ ದಾಖಲೆಗಳಲ್ಲೇ ಆರೋಪಿಗಳ ವಿರುದ್ಧ ಬಲವಾದ ಸಾಕ್ಷ್ಯಾಧಾರಗಳಿವೆ ಎಂದು ವಾದಿಸಿದರು.

ದೂರುದಾರರ ಪರ ವಕೀಲರ ವಾದ ಮಂಡನೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ದೂರಿಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಬೇಕೇ, ಬೇಡವೇ ಎಂಬುದರ ಬಗ್ಗೆ ಇದೇ 30ಕ್ಕೆ ಆದೇಶ ಪ್ರಕಟಿಸುವುದಾಗಿ ತಿಳಿಸಿದರು.

ಯಡಿಯೂರಪ್ಪ ವಿರುದ್ಧ ಬಾಷಾ ಸಲ್ಲಿಸಿರುವ ನಾಲ್ಕನೇ ಖಾಸಗಿ ದೂರನ್ನು ವಿಚಾರಣೆಗೆ ಸ್ವೀಕರಿಸುವ ಬಗ್ಗೆಯೂ ಇದೇ ದಿನ ಆದೇಶ ಪ್ರಕಟವಾಗಲಿದೆ.

ಗಡುವು ವಿಸ್ತರಣೆ:ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಸತಿ ಸಚಿವ ವಿ.ಸೋಮಣ್ಣ ಮತ್ತಿತರರ ವಿರುದ್ಧ ಸಾಫ್ಟ್‌ವೇರ್ ಎಂಜಿನಿಯರ್ ರವಿಕೃಷ್ಣಾ ರೆಡ್ಡಿ ಸಲ್ಲಿಸಿರುವ ಖಾಸಗಿ ದೂರಿನಲ್ಲಿರುವ ಆರೋಪಗಳ ಕುರಿತ ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸಲು ಲೋಕಾಯುಕ್ತ ಪೊಲೀಸರಿಗೆ ನೀಡಿದ್ದ ಗಡುವನ್ನು ಫೆಬ್ರುವರಿ 6ರವರೆಗೆ ವಿಸ್ತರಿಸಿ ವಿಶೇಷ ನ್ಯಾಯಾಲಯ ಶನಿವಾರ ಆದೇಶ ಹೊರಡಿಸಿದೆ.

ನ್ಯಾಯಾಲಯ ಈ ಹಿಂದೆ ನೀಡಿದ್ದ ಗಡುವಿನ ಪ್ರಕಾರ ಲೋಕಾಯುಕ್ತ ಪೊಲೀಸರು ಶನಿವಾರ ವರದಿ ಸಲ್ಲಿಸಬೇಕಿತ್ತು.

ADVERTISEMENT

ಆದರೆ, ಶನಿವಾರ ವಿಚಾರಣೆ ವೇಳೆ ಪ್ರಕರಣದ ತನಿಖೆಯಲ್ಲಿನ ಪ್ರಗತಿ ಕುರಿತು ವರದಿ ಸಲ್ಲಿಸಿದ ಲೋಕಾಯುಕ್ತ ಪೊಲೀಸರು, ಇನ್ನೂ ಎರಡು ವಾರ ಕಾಲಾವಕಾಶ ನೀಡುವಂತೆ ಕೋರಿದರು. ಅವರ ಬೇಡಿಕೆಯನ್ನು ಮಾನ್ಯ ಮಾಡಿದ ನ್ಯಾಯಾಧೀಶರು, ವಿಚಾರಣೆಯನ್ನು ಫೆ.6ಕ್ಕೆ ಮುಂದೂಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.