ADVERTISEMENT

ಬಿಎಸ್‌ವೈ ಹಾಜರಿಗೆ ವಿನಾಯಿತಿ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2012, 19:30 IST
Last Updated 6 ನವೆಂಬರ್ 2012, 19:30 IST

ಬೆಂಗಳೂರು: ಭದ್ರಾವತಿ ತಾಲ್ಲೂಕಿನ ಹುಣಸೆಕಟ್ಟೆ ಗ್ರಾಮದಲ್ಲಿ 64 ಎಕರೆ ಭೂಮಿಯನ್ನು ಕಾನೂನು ಉಲ್ಲಂಘಿಸಿ ಖರೀದಿ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮುಂದಿನ ವಿಚಾರಣೆಯ ವೇಳೆ ಲೋಕಾಯುಕ್ತ ನ್ಯಾಯಾಲಯದಲ್ಲಿ ಹಾಜರಾಗುವುದರಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಹೈಕೋರ್ಟ್ ವಿನಾಯಿತಿ ನೀಡಿದೆ.

ಶಿವಮೊಗ್ಗದ ವಕೀಲ ವಿನೋದ್ ಕುಮಾರ್ ಎಂಬುವವರು ದಾಖಲಿಸಿರುವ ದೂರು ಆಧರಿಸಿ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ದೂರನ್ನು ರದ್ದು ಮಾಡಬೇಕು ಎಂದು ಕೋರಿ ಯಡಿಯೂರಪ್ಪ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ ಅವರು ಇದೇ 15ಕ್ಕೆ ಮುಂದೂಡಿದರು. ಈ ವಿನಾಯಿತಿ ಒಂದು ಬಾರಿ ಹಾಜರಾಗುವುದಕ್ಕೆ ಮಾತ್ರ.

ರಾಜ್ಯಪಾಲರ ಕ್ರಮ ಎತ್ತಿಹಿಡಿದ ಹೈಕೋರ್ಟ್

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ (ವಿಟಿಯು) ಕಾರ್ಯಕಾರಿ ಮಂಡಳಿ ಸದಸ್ಯರಾಗಿದ್ದ ಡಾ. ಜಗನ್ನಾಥ ರೆಡ್ಡಿ ಹಾಗೂ ಪ್ರಸಾದ್ ಆರ್. ಅವರ ಸದಸ್ಯತ್ವವನ್ನು ರದ್ದು ಮಾಡಿದ ವಿ.ವಿ. ಕುಲಾಧಿಪತಿ, ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಕ್ರಮವನ್ನು ಹೈಕೋರ್ಟ್ ಮಂಗಳವಾರ ಎತ್ತಿಹಿಡಿದಿದೆ. ಸದಸ್ಯತ್ವ ರದ್ದು ಮಾಡಿದ ರಾಜ್ಯಪಾಲರ ಕ್ರಮ ಪ್ರಶ್ನಿಸಿ ರೆಡ್ಡಿ ಮತ್ತು ಪ್ರಸಾದ್ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್ ಅವರು, ವಿಟಿಯು ಕಾಯ್ದೆಯ ಅನ್ವಯ ಕುಲಾಧಿಪತಿಗಳಿಗೆ ಆ ಅಧಿಕಾರ ಇದೆ ಎಂದು ಆದೇಶದಲ್ಲಿ ಹೇಳಿದ್ದಾರೆ.

ವಿಚಾರಣೆ ಮುಂದಕ್ಕೆ
`ಬೆಂಗಳೂರಿನ ಮತದಾರರ ಪಟ್ಟಿಯಿಂದ ಸುಮಾರು 13 ಲಕ್ಷ ಮಂದಿ ಹೆಸರು ಕೈಬಿಟ್ಟುಹೋಗಿದೆ. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿರುವ ಬೆಂಗಳೂರಿನ ಮತದಾರರ ಪಟ್ಟಿಯಲ್ಲೂ ಕೆಲವು ದೋಷಗಳಿವೆ~ ಎಂದು ದೂರಿ ಕಮಾಂಡರ್ ಪಿ.ಜಿ. ಭಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.

ನಾಲ್ಕು ವಾರ ಕಾಲಾವಕಾಶ
ಬೆಂಗಳೂರಿನ ಬಿಳೇಕಳ್ಳಿಯಲ್ಲಿ ರಾಮಯ್ಯ ಎಂಬುವವರು ಸರ್ಕಾರಕ್ಕೆ ಸೇರಿದ 2.10 ಎಕರೆ ಭೂಮಿಯನ್ನು ದಾಖಲೆಗಳನ್ನು ತಿರುಚಿ ಖರೀದಿ ಮಾಡಿದ್ದಾರೆ ಎಂಬ ಆರೋಪ ಕುರಿತು ಹೇಳಿಕೆ ಸಲ್ಲಿಸಲು ಹೈಕೋ  ರ್ಟ್, ಸರ್ಕಾರಕ್ಕೆ ನಾಲ್ಕು ವಾರ ಕಾಲಾವಕಾಶ ನೀಡಿದೆ.

ಹೃದಯಾಘಾತದಿಂದ ಸಾವು
 ಧಾರವಾಡದ ವಕೀಲ ಪದ್ಮನಾಭ ಪಣಿಕ್ಕರ್ ಅವರು ಹೈಕೋರ್ಟ್ ಆವರಣದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಹೈಕೋರ್ಟ್‌ನಲ್ಲಿ ನಡೆದ ಲೋಕ ಅದಾಲತ್‌ನ ಸದಸ್ಯತ್ವಕ್ಕೆ ಸಂಬಂಧಿಸಿದ ಸಂದರ್ಶನದಲ್ಲಿ ಪಾಲ್ಗೊಳ್ಳಲು ಅವರು ಬೆಂಗಳೂರಿಗೆ ಬಂದಿದ್ದರು.

ಹೈಕೋರ್ಟ್‌ನ ಆವರಣದಲ್ಲಿ ನಡೆದುಬರುತ್ತಿದ್ದ ವೇಳೆ ಅವರು ಕುಸಿದುಬಿದ್ದರು.  ಸ್ಥಳದಲ್ಲಿದ್ದ ಕೆಲವು ವಕೀಲರು ಅವರನ್ನು ಹೈಕೋರ್ಟ್ ಆವರಣದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿದರು.
ಪದ್ಮನಾಭ ಅವರನ್ನು ಪರೀಕ್ಷಿಸಿದ ವೈದ್ಯರು, ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.