ADVERTISEMENT

ಬಿಜೆಪಿಯಿಂದ ರ‍್ಯಾಲಿ: ಅಭಿನಂದನ್‌ಗೆ ಜೈಕಾರ

‘ಮತ್ತೊಮ್ಮೆ ಮೋದಿ’ ಆಶಯದೊಂದಿಗೆ ನಡೆದ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 19:49 IST
Last Updated 2 ಮಾರ್ಚ್ 2019, 19:49 IST
ಬಿಜೆಪಿ ರ್‍ಯಾಲಿಯಲ್ಲಿ ಸಂಸದರಾದ ಪಿ.ಸಿ. ಮೋಹನ್‌, ರಾಜೀವ್ ಚಂದ್ರಶೇಖರ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಮತ್ತಿತರರು ಭಾಗಿಯಾಗಿದ್ದರು.
ಬಿಜೆಪಿ ರ್‍ಯಾಲಿಯಲ್ಲಿ ಸಂಸದರಾದ ಪಿ.ಸಿ. ಮೋಹನ್‌, ರಾಜೀವ್ ಚಂದ್ರಶೇಖರ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಮತ್ತಿತರರು ಭಾಗಿಯಾಗಿದ್ದರು.   

ಬೆಂಗಳೂರು: ‘ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು’ ಎಂಬ ಆಶಯದಿಂದ ಬಿಜೆಪಿ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿ ಶನಿವಾರ ನಗರದ ವಿವಿಧೆಡೆ ನಡೆಯಿತು.

ಪ್ರಧಾನಿ ಮೋದಿ ಹಾಗೂ ಪಾಕಿಸ್ತಾನದಿಂದ ಬಿಡುಗಡೆಯಾಗಿ ತಾಯ್ನಾಡಿಗೆ ಮರಳಿದ ವಿಂಗ್ ಕಮಾಂಡರ್‌ ಅಭಿನಂದನ್ ವರ್ಧಮಾನ್ ಅವರ ಪರ ಜೈಕಾರ ಕೂಗಿ ಸಂಭ್ರಮಪಟ್ಟರು.

ಬಿಜೆಪಿ ಯುವ ಮೋರ್ಚಾ ಚಿಕ್ಕಲಾಲ್‌ ಬಾಗ್‌ನಲ್ಲಿ ಹಮ್ಮಿಕೊಂಡಿದ್ದ ರ‍್ಯಾಲಿಗೆ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ವೈ. ವಿಜಯೇಂದ್ರ ಚಾಲನೆ ನೀಡಿದರು.

ADVERTISEMENT

ಬಳಿಕ ಮಾತನಾಡಿದ ಅವರು, ಮೋದಿ ಅವರು ಪ್ರಧಾನಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಐದು ವರ್ಷಗಳಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಜಾರಿಗೊಳಿಸಿದ ನೂರಾರು ಕಾರ್ಯಕ್ರಮಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ. ಉಗ್ರರ ಮೇಲೆ ನಿರ್ದಾಕ್ಷಿಣ್ಯವಾಗಿ ದಾಳಿ ನಡೆಸಲು ಸೇನೆಗೆ ‍ಪೂರ್ಣ ಸ್ವಾತಂತ್ರ್ಯ ಕೊಟ್ಟ ಮೋದಿ ಅವರು ದೇಶದ ಸಾರ್ವಭೌಮತ್ವ ಹಾಗೂ ಘನತೆಯನ್ನು ಎತ್ತಿ ಹಿಡಿದಿದ್ದಾರೆ ಎಂದರು.

‘ಮತ್ತೊಮ್ಮೆ ಮೋದಿ’ ಎಂಬ ಆಶಯದೊಂದಿಗೆ ರ‍್ಯಾಲಿ ನಡೆಯುತ್ತಿದೆ. ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಫಲವೇನು ಎಂಬುದನ್ನು ಕಾರ್ಯಕರ್ತರು ಮನೆಮನೆಗೂ ತಲುಪಿಸಲಿದ್ದಾರೆ ಎಂದು ತಿಳಿಸಿದರು.

ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಮಾತನಾಡಿ, ಭ್ರಷ್ಟಾಚಾರಕ್ಕೆ ಇತಿಶ್ರೀ ಹಾಡಿ, ದೇಶವನ್ನು ಪ್ರಗತಿ ಪಥದಲ್ಲಿ ಮುಂದುವರಿಸುವಲ್ಲಿ ಪ್ರಧಾನಿ ಮೋದಿ ಅವರು ಹೊಸ ಹಾದಿ ಹಾಕಿಕೊಟ್ಟಿದ್ದಾರೆ. ಐದು ವರ್ಷಗಳಿಂದ ಕೈಗೊಂಡಿರುವ ಪ್ರಗತಿಪರ ಯೋಜನೆಗಳು ಮುಂದುವರಿಯಬೇಕಾದರೆ ದೇಶದ ಜನರು ಕೈಜೋಡಿಸಬೇಕಾಗಿದೆ ಎಂದು ಹೇಳಿದರು.

ಪದ್ಮನಾಭನಗರದಲ್ಲಿ ಆರ್. ಅಶೋಕ್ ಮಹದೇವಪುರ ಕ್ಷೇತ್ರದಲ್ಲಿ ಅರವಿಂದ ಲಿಂಬಾವಳಿ, ಹೆಬ್ಬಾಳ ಕ್ಷೇತ್ರದಲ್ಲಿ ವೈ.ಎ.ನಾರಾಯಣಸ್ವಾಮಿ ನೇತೃತ್ವದಲ್ಲಿ ಬೈಕ್ ರ‍್ಯಾಲಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.