ADVERTISEMENT

ಬಿಜೆಪಿ ಮುಖಂಡರ ಪ್ರವಾಸ 21ರಿಂದ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 19:59 IST
Last Updated 18 ಏಪ್ರಿಲ್ 2013, 19:59 IST

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್, ಹಿರಿಯ ಮುಖಂಡರಾದ ಎಲ್.ಕೆ.ಅಡ್ವಾಣಿ, ಸುಷ್ಮಾ ಸ್ವರಾಜ್ ಮತ್ತು ವೆಂಕಯ್ಯ ನಾಯ್ಡು ಅವರು ಇದೇ 21ರಿಂದ ರಾಜ್ಯದಲ್ಲಿ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ.

ಮುಖಂಡರು, ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರಚಾರಕ್ಕೆ ಚಾಲನೆ ನೀಡುವರು ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ  ಪ್ರಹ್ಲಾದ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ತಿಳಿಸಿದರು.

ಇದೇ 21ರ ಪ್ರವಾಸ ಕಾರ್ಯಕ್ರಮ ಅಂತಿಮವಾಗಿದೆ. ನಂತರದ ದಿನಗಳ ಪ್ರವಾಸದ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೂ ರಾಜ್ಯಕ್ಕೆ ಬರುತ್ತಿದ್ದು, ಅವರ ಭೇಟಿಯ ದಿನಾಂಕಗಳು ಇನ್ನೂ ಅಂತಿಮವಾಗಿಲ್ಲ ಎಂದರು.

ಅಡ್ವಾಣಿ ಅವರು ಇದೇ 21ರಂದು ರಾಣೆಬೆನ್ನೂರು ಮತ್ತು ದಾವಣಗೆರೆಯಲ್ಲಿ ನಡೆಯುವ ಬಹಿರಂಗ ಸಮಾವೇಶಗಳಲ್ಲಿ ಭಾಗವಹಿಸಲಿದ್ದಾರೆ. ಸುಷ್ಮಾ ಅವರು ಅಂದು ಸಂಜೆ ನಗರದ ಮಲ್ಲೇಶ್ವರದಲ್ಲಿ ನಡೆಯುವ ಸಮಾರಂಭದಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಮಾಡಲಿದ್ದಾರೆ ಎಂದು ಹೇಳಿದರು.

ರಾಜನಾಥ ಸಿಂಗ್ ಅವರು ಚಿಕ್ಕೋಡಿಯಲ್ಲಿ, ವೆಂಕಯ್ಯ ನಾಯ್ಡು ಅವರು ರಾಯಚೂರು, ಸಿಂಧನೂರು ಮತ್ತು ಗಂಗಾವತಿ; ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಬೀದರ್, ಗುಲ್ಬರ್ಗ ಹಾಗೂ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಡಿ.ವಿ.ಸದಾನಂದ ಗೌಡ ಅವರು ಮೈಸೂರು ಜಿಲ್ಲೆಯಲ್ಲಿ ಪ್ರಚಾರ ಮಾಡುವರು ಎಂದು ವಿವರಿಸಿದರು.

ಇಂದು ಪ್ರಣಾಳಿಕೆ ಬಿಡುಗಡೆ
ಬೆಂಗಳೂರು: ವಿಧಾನಸಭಾ ಚುನಾವಣೆಗೆ ಬಿಜೆಪಿಯ ಪ್ರಣಾಳಿಕೆಯನ್ನು ಪಕ್ಷದ ರಾಷ್ಟ್ರೀಯ ಮುಖಂಡ ಅರುಣ್ ಜೇಟ್ಲಿ ಶುಕ್ರವಾರ ಬಿಡುಗಡೆ ಮಾಡುವರು. ಖಾಸಗಿ ಹೋಟೆಲ್‌ನಲ್ಲಿ ಮಧ್ಯಾಹ್ನ 1ಕ್ಕೆ ನಡೆಯುವ ಸಮಾರಂಭದಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲಾಗುವುದು ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT