ADVERTISEMENT

ಬಿಜೆಪಿ ವಿರುದ್ಧಹುನ್ನಾರ: ಚಂದ್ರೇಗೌಡ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 20:20 IST
Last Updated 21 ಫೆಬ್ರುವರಿ 2011, 20:20 IST

ಯಲಹಂಕ: ರಾಜ್ಯದಲ್ಲಿನ ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸಲು  ವಿರೋಧ ಪಕ್ಷಗಳು ಹುನ್ನಾರ ನಡೆಸಿವೆ ಎಂದು ಬೆಂಗಳೂರು ಉತ್ತರ ಲೋಕಸಭಾ ಸದಸ್ಯ ಡಿ.ಬಿ.ಚಂದ್ರೇಗೌಡ ಆರೋಪ ಮಾಡಿದರು.

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ನೂತನ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಪಿ.ಕೆ.ರಾಜಗೋಪಾಲ್ ಅವರಿಗೆ ವಿದ್ಯಾರಣ್ಯಪುರದ ಆಟದ ಮೈದಾನದಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚುನಾವಣೆಗಳಲ್ಲಿ ಸೋತು ಹತಾಶರಾಗಿರುವ ಈ ನಾಯಕರು ದಿನನಿತ್ಯ ಸರ್ಕಾರದ ವಿರುದ್ಧ ಆರೋಪ ಮಾಡುತ್ತ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಎ.ರವಿ ಮಾತನಾಡಿ, ಪ್ರತಿ ಬೂತ್‌ನಲ್ಲಿ ಕನಿಷ್ಠ 25 ಜನ ಕಾರ್ಯಕರ್ತರ ಪಡೆಯನ್ನು ಸಿದ್ಧಪಡಿಸಬೇಕು. ಇದರಲ್ಲಿ 5ರಿಂದ 10 ಜನ ಮಹಿಳೆಯರನ್ನು ಗುರುತಿಸಿ, ಎಲ್ಲ ಜನಾಂಗದವರಿಗೂ ಪ್ರಾಮುಖ್ಯತೆ ನೀಡಬೇಕು. ಈ ಪಡೆಯ ಸದಸ್ಯರು ಮುಂಬರುವ ಚುನಾವಣೆಗಳಲ್ಲಿ ಪಕ್ಷವನ್ನು ಗೆಲ್ಲಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.

ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ಕ್ಷೇತ್ರದ ಮಾಜಿ ಅಧ್ಯಕ್ಷ ಕೆ.ಪ್ರಕಾಶ್, ಬಿಬಿಎಂಪಿ ಸದಸ್ಯರಾದ ಅಶ್ವಥನಾರಾಯಣಗೌಡ, ನಂದಿನಿ. ಕೆ.ಶ್ರೀನಿವಾಸ್ ಮಾತನಾಡಿದರು.

ಪಾಲಿಕೆ ಸದಸ್ಯರಾದ ಈ.ಪಿಳ್ಳಪ್ಪ, ಕೆ.ಎ.ಮುನೀಂದ್ರಕುಮಾರ್, ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಪ್ರಮೀಳಾ, ಜಿಲ್ಲಾ ಉಪಾಧ್ಯಕ್ಷ ನಂಜಪ್ಪ, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಜಿ.ಶ್ರೀನಿವಾಸ್, ನಗರ ಜಿಲ್ಲಾ ಕಾರ್ಯದರ್ಶಿ ನಾರಾ ಯಣಸ್ವಾಮಿ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಎ.ಮುನಿರಾಜು, ಎಸ್‌ಸಿ ಮೋರ್ಚಾ ಅಧ್ಯಕ್ಷ ಮುನಿಹನುಮಪ್ಪ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.