ADVERTISEMENT

ಬಿಜೆಪಿ ಸಭೆ: ಯಡಿಯೂರಪ್ಪ ಪರ ನಿಲ್ಲಲು ಸಚಿವರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 19:30 IST
Last Updated 17 ಅಕ್ಟೋಬರ್ 2011, 19:30 IST

ಬೆಂಗಳೂರು: ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪರ ಇಡೀ ಪಕ್ಷ ನಿಲ್ಲಲು ಸೋಮವಾರ ರಾತ್ರಿ ನಡೆದ ಸಚಿವರ ಸಭೆಯಲ್ಲಿ ನಿರ್ಧರಿಸಲಾಗಿದೆ.ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಸಚಿವರ ಸಭೆ ನಡೆಯಿತು.

`ಯಡಿಯೂರಪ್ಪ ನಮ್ಮ ನಾಯಕ. ಪಕ್ಷವನ್ನು ಕಟ್ಟಿ ಬೆಳೆಸಿದವರು. ರಾಜಕೀಯ ಕಾರಣಕ್ಕೆ ಇವತ್ತು ಸಂಕಷ್ಟ ಎದುರಿಸುತ್ತಿದ್ದು, ಅವರಿಗೆ ಎಲ್ಲರೂ ಬೆಂಬಲ ನೀಡಬೇಕು~ ಎನ್ನುವ ವಿಷಯವನ್ನು ಮುಖ್ಯಮಂತ್ರಿಯೇ ಸಭೆ ಮುಂದೆ ಮಂಡಿಸಿದರು ಎನ್ನಲಾಗಿದೆ.

ಇದಕ್ಕೆ ಈಶ್ವರಪ್ಪ ಸೇರಿದಂತೆ ಎಲ್ಲ ಸಚಿವರೂ ಬೆಂಬಲಿಸಿದರು. ಅವರ ಕಾನೂನು ಹೋರಾಟಕ್ಕೆ ಪೂರ್ಣ ಬೆಂಬಲ ನೀಡುವ ಬಗ್ಗೆಯೂ ಚರ್ಚಿಸಲಾಯಿತು ಎಂದು ಗೊತ್ತಾಗಿದೆ.

ವಿದ್ಯುತ್ ಸಮಸ್ಯೆ: ರಾಜ್ಯದಲ್ಲಿ ತಲೆದೋರಿರುವ ವಿದ್ಯುತ್ ಸಮಸ್ಯೆಗೆ ಬಿಜೆಪಿ ಸರ್ಕಾರ ಕಾರಣ ಎನ್ನುವ ಹಾಗೆ ಪ್ರತಿಪಕ್ಷಗಳು ಟೀಕೆ ಮಾಡುತ್ತಿವೆ. ಆದರೆ, ವಾಸ್ತವ ಸ್ಥಿತಿ ಏನು ಎನ್ನುವುದನ್ನು ರಾಜ್ಯದ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದೂ ಸಭೆಯಲ್ಲಿ ನಿರ್ಧರಿಸಲಾಗಿದೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೆಚ್ಚುವರಿಯಾಗಿ 2,600 ಮೆಗಾವಾಟ್ ವಿದ್ಯುತ್ ಉತ್ಪಾದಿಸುತ್ತಿದ್ದು, ಈ ಕುರಿತು ಜಾಹೀರಾತುಗಳ ಮೂಲಕ ಜನರಿಗೆ ತಿಳಿಸಬೇಕು. ಕಾಂಗ್ರೆಸ್ಸಿಗರಿಗೆ ಸರಿಯಾದ ಉತ್ತರ ನೀಡಬೇಕೆನ್ನುವ ವಿಷಯ ಕುರಿತೂ ಚರ್ಚಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.