ADVERTISEMENT

ಬಿಡಿಎಗೆ ಭೂಮಿ ಇಲ್ಲ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2012, 19:30 IST
Last Updated 17 ಫೆಬ್ರುವರಿ 2012, 19:30 IST

ಬೆಂಗಳೂರು:  ಸುಮನಹಳ್ಳಿಯಲ್ಲಿರುವ ನಿರಾಶ್ರಿತರ ಪುನರ್ವಸತಿ ಕೇಂದ್ರದ 123.30 ಎಕರೆ ಭೂಮಿಯನ್ನು ಸಭಾಂಗಣ, ಆಸ್ಪತ್ರೆ, ಉದ್ಯಾನ ನಿರ್ಮಾಣಕ್ಕೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ನೀಡಲು ಹೊರಡಿಸಿದ್ದ ಆದೇಶವನ್ನು ರಾಜ್ಯ ಸರ್ಕಾರ ಶುಕ್ರವಾರ ಅಧಿಕೃತವಾಗಿ ವಾಪಸ್ ಪಡೆದಿದೆ.

ಕೇಂದ್ರೀಯ ಪರಿಹಾರ ಸಮಿತಿಯ ಅಧೀನದಲ್ಲಿರುವ ನಿರಾಶ್ರಿತರ ಪುನರ್ವಸತಿ ಕೇಂದ್ರದ ಭೂಮಿಯನ್ನು ಬಿಡಿಎ ವಶಕ್ಕೆ ನೀಡಲು 2010ರ ಜೂನ್ 10ರಂದು ಸರ್ಕಾರ ಆದೇಶ ಹೊರಡಿಸಿತ್ತು. ಈ ತೀರ್ಮಾನವನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಭೂಮಿಯನ್ನು ಹಸ್ತಾಂತರ ಮಾಡುವ ನಿರ್ಧಾರವನ್ನು ಹಿಂದಕ್ಕೆ ಪಡೆಯುವುದಾಗಿ ಕಳೆದ ಜನವರಿ 31ರಂದು ಸರ್ಕಾರ ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿತ್ತು. ಅದರ ಪ್ರಕಾರ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಸಂಪುಟ ಸಭೆಯ ಬಳಿಕ ವಿವರ ನೀಡಿದ ಕಾನೂನು ಸಚಿವ ಎಸ್. ಸುರೇಶಕುಮಾರ್, `ನಿರಾಶ್ರಿತರ ಪುನರ್ವಸತಿ ಕೇಂದ್ರದ ಭೂಮಿಯನ್ನು ಬಿಡಿಎಗೆ ವರ್ಗಾಯಿಸುವ ಆದೇಶವನ್ನು ಹಿಂದಕ್ಕೆ ಪಡೆಯುವುದಾಗಿ ಸರ್ಕಾರ ಹೈಕೋರ್ಟ್‌ಗೆ ತಿಳಿಸಿತ್ತು. ಅದರಂತೆ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಭೂಮಿ ನಿರಾಶ್ರಿತರ ಪುನರ್ವಸತಿ ಕೇಂದ್ರದ ಬಳಿಯೇ ಇರುತ್ತದೆ~ ಎಂದರು.

ಶಾಲೆ ಸ್ಥಳಾಂತರ: ಯಲಹಂಕ ಮಾರುಕಟ್ಟೆ ಸಮೀಪದ ಸರ್ಕಾರಿ ಶಾಲೆಯನ್ನು ಬೇರೆಡೆ ಸ್ಥಳಾಂತರ ಮಾಡಲು ತೀರ್ಮಾನಿಸಲಾಗಿದೆ. ಶಾಲೆಯ ಭೂಮಿಯನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ನಿಲ್ದಾಣ ಸ್ಥಾಪನೆಗೆ ನೀಡಲಾಗುತ್ತದೆ.

ಬಿಎಂಟಿಸಿ ಶಾಲೆಯ ಅಭಿವೃದ್ಧಿ ಸಮಿತಿಗೆ ಒಂದು ಕೋಟಿ ರೂಪಾಯಿ ನೀಡಲಿದೆ. ಸದ್ಯ ಇರುವ ಶಾಲೆಯ ಆವರಣ ಕಿರಿದಾಗಿದ್ದು, ವಿಶಾಲವಾದ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.