ADVERTISEMENT

ಬಿಡಿಎ ನಿವೇಶನ ಹರಾಜು: ಠೇವಣಿ ಮೊತ್ತ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 19:59 IST
Last Updated 4 ಏಪ್ರಿಲ್ 2013, 19:59 IST

ಬೆಂಗಳೂರು: ನಿವೇಶನ ಹರಾಜು ಪ್ರಕ್ರಿಯೆಯಲ್ಲಿ ಆಗುತ್ತಿದ್ದ ದುರುಪಯೋಗವನ್ನು ತಪ್ಪಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಆರಂಭಿಕ ಠೇವಣಿ ಮೊತ್ತವನ್ನು ನಾಲ್ಕು ಪಟ್ಟು ಹೆಚ್ಚಿಸಿದೆ.

ಸದ್ಯ ಬಹಿರಂಗ ಹರಾಜಿನಲ್ಲಿ ಭಾಗವಹಿಸುವ ನಾಗರಿಕರು ಆರಂಭಿಕ ಠೇವಣಿಯಾಗಿ  ರೂ. 1 ಲಕ್ಷ ಕಟ್ಟಬೇಕಾಗಿತ್ತು. ಅದನ್ನು ರೂ. 4 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಹರಾಜಿನಲ್ಲಿ ಅತಿ ಹೆಚ್ಚಿನ ಮೊತ್ತಕ್ಕೆ ಬಿಡ್ ಕೂಗಿದವರು, ಹರಾಜು ನಡೆದ ಮೂರು ದಿನಗಳ ಒಳಗೆ ಬಿಡ್‌ನ ಶೇಕಡಾ 25ರಷ್ಟನ್ನು ಹಾಗೂ 45 ದಿವಸಗಳ ಒಳಗೆ ಉಳಿದ ಶೇ 75ರಷ್ಟು ಹಣವನ್ನು ಪಾವತಿ ಮಾಡಬೇಕು. ನಿಗದಿತ ಅವಧಿಯೊಳಗೆ ಹಣ ಕಟ್ಟದೇ ಇರುವ ಬಿಡ್‌ದಾರರ ಆರಂಭಿಕ ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಯಶಸ್ವಿಯಾಗದ ಬಿಡ್‌ದಾರರಿಗೆ ಆರಂಭಿಕ ಠೇವಣಿಯನ್ನು ಹಿಂದಿರುಗಿಸಲಾಗುತ್ತದೆ. ಇದು ನಿಯಮ.

ಹರಾಜಿನಲ್ಲಿ ಯಶಸ್ವಿಯಾದ ಬಿಡ್‌ದಾರರಲ್ಲಿ ಕೆಲವರು ಯಾವ್ಯಾವುದೋ ಕಾರಣಕ್ಕೆ ನಿಗದಿತ ಅವಧಿಯೊಳಗೆ ಹಣ ಪಾವತಿ ಮಾಡುತ್ತಿರಲಿಲ್ಲ. ಅತಿ ಹೆಚ್ಚು ಮೊತ್ತಕ್ಕೆ ಬಿಡ್ ಕೂಗಿದ ಎರಡನೆಯವರಿಗೆ ನಿವೇಶನ ನೀಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಮತ್ತೆ ಹರಾಜು ಪ್ರಕ್ರಿಯೆ ನಡೆಸಬೇಕು. ಯಶಸ್ವಿ ಬಿಡ್‌ದಾರರ ಆರಂಭಿಕ ಠೇವಣಿ ಮೊತ್ತವನ್ನು ಮುಟ್ಟುಗೋಲು ಹಾಕಿಕೊಂಡರೂ ಪ್ರಾಧಿಕಾರಕ್ಕೆ ನಷ್ಟವಾಗುತ್ತಿತ್ತು.

ಈ ನಷ್ಟವನ್ನು ತಪ್ಪಿಸಲು ಹಾಗೂ ಬಿಡ್‌ದಾರರಿಗೆ ಎಚ್ಚರಿಕೆ ನೀಡಲು ಆರಂಭಿಕ ಠೇವಣಿ ಮೊತ್ತವನ್ನು ಹೆಚ್ಚಿಸಲಾಗಿದೆ. ಇದು ಈ ತಿಂಗಳ 16ರಂದು ನಡೆಯುವ ಬಹಿರಂಗ ಹರಾಜು ಪ್ರಕ್ರಿಯಿಯಿಂದಲೇ ಅನ್ವಯವಾಗಲಿದೆ ಎಂದು ಪ್ರಾಧಿಕಾರದ ಸದಸ್ಯ (ಹಣಕಾಸು) ಗಂಗಣ್ಣ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.