ADVERTISEMENT

ಬಿದಿರು: ನಾಳೆಯಿಂದ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 18:30 IST
Last Updated 15 ಫೆಬ್ರುವರಿ 2011, 18:30 IST

ಬೆಂಗಳೂರು: ಬಿದಿರು ಬೆಳೆಯುವುದನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯು (ಐಡಬ್ಲ್ಯೂಎಸ್‌ಟಿ) ಇದೇ 17 ಮತ್ತು 18ರಂದು ‘ಬಿದಿರು ಬೆಳೆ ಪ್ರಚಾರ, ನಿರ್ವಹಣೆ ಹಾಗೂ ಬಳಕೆಗೆ ಸಂಬಂಧಪಟ್ಟಂತೆ ಇತ್ತೀಚಿನ ಬೆಳವಣಿಗೆ’ ಕುರಿತು ವಿಚಾರ ಸಂಕಿರಣವನ್ನು ನಗರದಲ್ಲಿ ಹಮ್ಮಿಕೊಂಡಿದೆ.

‘ಬಿದಿರು ಬಹಳ ಉಪಯುಕ್ತವಾಗಿದ್ದು, ಗ್ರಾಮೀಣ ಜನರು ಬಿದಿರನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಾರೆ. ಈಚಿನ ವರ್ಷಗಳಲ್ಲಿ ಗೃಹ ಬಳಕೆ ಪೀಠೋಪಕರಣಗಳಿಗೂ ಇದನ್ನು ಬಳಸಲಾಗುತ್ತಿದೆ. ಬಿದಿರು ಜೀವ ವೈವಿಧ್ಯವನ್ನು ಕಾಪಾಡುವ ಜತೆಗೆ ಮಣ್ಣಿನ ಸವಕಳಿಯನ್ನು ತಡೆಗಟ್ಟುತ್ತದೆ. ಹಾಗಾಗಿ ಉಪಯುಕ್ತವೆನಿಸಿದ್ದು, ಇದನ್ನು ಹೆಚ್ಚಾಗಿ ಬೆಳೆಯುವಂತೆ ಪ್ರೇರೇಪಿಸುವ ನಿಟ್ಟಿನಲ್ಲಿ ವಿಚಾರಸಂಕಿರಣ ಹಮ್ಮಿಕೊಳ್ಳಲಾಗಿದೆ’ ಎಂದು ಐಡಬ್ಲ್ಯೂಎಸ್‌ಟಿ ನಿರ್ದೇಶಕ ಎಸ್.ಸಿ. ಜೋಶಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ದೇಶದ ಒಟ್ಟು ಅರಣ್ಯ ಪ್ರದೇಶದ ಶೇ 12.8ರಷ್ಟು ಜಾಗದಲ್ಲಿ ಬಿದಿರು ಬೆಳೆದಿದೆ. ಜಗತ್ತಿನಲ್ಲಿ ಎರಡನೇ ಅತಿ ಹೆಚ್ಚು ಬಿದಿರು ಪ್ರಭೇದವಿರುವ ರಾಷ್ಟ್ರ ಎಂಬ ಹೆಗ್ಗಳಿಕೆ ಕೂಡ ಇದೆ. ಆದರೂ ದೇಶದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಬಿದಿರು ಉತ್ಪಾದನೆಯಾಗುತ್ತಿಲ್ಲ’ ಎಂದರು.

‘ಬಿದಿರನ್ನು ಬಳಸಿ ಕರಕುಶಲ ವಸ್ತುಗಳು, ಮೌಲ್ಯವರ್ಧಿತ ಸಾಧನಗಳನ್ನು ಸಿದ್ಧಪಡಿಸಬಹುದಾಗಿದ್ದು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಸ್ಥಾಪಿಸಬಹುದಾಗಿದೆ. ಆ ಹಿನ್ನೆಲೆಯಲ್ಲಿ ಬಿದಿರು ಬೆಳೆಯುವುದು, ಅದರ ಉಪಯುಕ್ತತೆ ಹಾಗೂ ಮೌಲ್ಯವರ್ಧನೆಗೊಳಿಸುವ ಕುರಿತು ವಿಚಾರಸಂಕಿರಣ ಆಯೋಜಿಸಲಾಗಿದೆ’ ಎಂದು ಹೇಳಿದರು.‘ಭಾರತೀಯ ಬಿದಿರು ಸಂಸ್ಥೆಯ (ಬಿಎಸ್‌ಐ) ಸಹಯೋಗದಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಬಿದಿರು ಮಿಷನ್ ಯೋಜನೆಯ ಆರ್ಥಿಕ ನೆರವಿನಡಿ ವಿಚಾರಸಂಕಿರಣ ಹಮ್ಮಿಕೊಳ್ಳಲಾಗಿದೆ.

ಮಲ್ಲೇಶ್ವರದ 18ನೇ ಅಡ್ಡರಸ್ತೆಯಲ್ಲಿರುವ ಸಂಸ್ಥೆಯ ಆವರಣದಲ್ಲಿ ಇದೇ 17ರಂದು ಬೆಳಿಗ್ಗೆ 10 ಗಂಟೆಗೆ ಕೇಂದ್ರ ಸರ್ಕಾರ ವಿಶೇಷ ಕಾರ್ಯದರ್ಶಿ ಡಾ.ಪಿ.ಜೆ. ದಿಲೀಪ್ ಕುಮಾರ್ ವಿಚಾರಸಂಕಿರಣ ಉದ್ಘಾಟಿಸಲಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.