ಬೆಂಗಳೂರು: ನಗರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಪ್ರಸಕ್ತ ಹಣಕಾಸು ವರ್ಷದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ರೂ 1663 ಕೋಟಿ ಅನುದಾನ ನೀಡಿದೆ ಎಂದು ಮೇಯರ್ ಡಿ. ವೆಂಕಟೇಶಮೂರ್ತಿ ತಿಳಿಸಿದರು.
ಶನಿವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, `ಸಿಗ್ನಲ್ ಮುಕ್ತ ಕಾರಿಡಾರ್ ಯೋಜ ೆಗಾಗಿಯೇ ರೂ 618 ಕೋಟಿಯನ್ನು ಒದಗಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಮುಂಬರುವ ಜನವರಿ ವೇಳೆಗೆ ಗುತ್ತಿಗೆದಾರರ ಜೊತೆ ಒಪ್ಪಂದ ಮಾಡಿಕೊಂಡು ಕಾಮಗಾರಿ ಆರಂಭಿಸಲಾಗುವುದು~ ಎಂದು ಹೇಳಿದರು.
`ನಗರದ 45 ರಸ್ತೆಗಳ ಅಭಿವೃದ್ಧಿಗೆ ರೂ 200 ಕೋಟಿ ಮಂಜೂರಾಗಿದ್ದು, ಈಗಾಗಲೇ ಮೊದಲ ಹಂತದಲ್ಲಿ ಏಳು ರಸ್ತೆಗಳ ಅಭಿವೃದ್ಧಿಗೆ ಬೆಂಗಳೂರು ನಗರ ಸಂಪರ್ಕ ಪ್ರತಿಷ್ಠಾನ (ಬಿಸಿಸಿಎಫ್) ಯೋಜನಾ ವರದಿ ನೀಡಿದೆ~ ಎಂದು ವಿವರಿಸಿದರು.
ನಗರದ ಐದು ಕಡೆ ಮೇಲ್ಸೇತುವೆ ಇಲ್ಲವೆ ಕೆಳಸೇತುವೆ ನಿರ್ಮಿಸಲು ಯೋಜನೆ ಸಿದ್ಧಪಡಿಸಲಾಗುತ್ತಿದ್ದು, ಇದಕ್ಕಾಗಿ ರೂ 195 ಕೋಟಿ ಮೀಸಲಿಡಲಾಗಿದೆ. 86 ರಸ್ತೆಗಳ ಮರು ಡಾಂಬರೀಕರಣಕ್ಕೆ ರೂ 140 ಕೋಟಿ, 13 ರಸ್ತೆಗಳ ಅಗಲೀಕರಣಕ್ಕೆ ರೂ 60 ಕೋಟಿ ಮತ್ತು ಬಹುಮಹಡಿ ವಾಹನ ನಿಲ್ದಾಣ ಸಂಕೀರ್ಣ ನಿರ್ಮಾಣಕ್ಕೆ ರೂ 200 ಕೋಟಿ ಖರ್ಚು ಮಾಡಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.
`ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಯುಬಿ) ಒಳಚರಂಡಿ ನಿರ್ಮಾಣಕ್ಕಾಗಿ ಹಲವೆಡೆ ರಸ್ತೆಗಳನ್ನು ಅಗಿದಿದ್ದು, ಶೀಘ್ರವೇ ಅವುಗಳನ್ನು ದುರಸ್ತಿಗೊಳಿಸಲಾಗುವುದು. ಬರುವ ಮಾರ್ಚ್ ಮುನ್ನವೇ ಎಲ್ಲ ರಸ್ತೆಗಳ ಗುಂಡಿಗಳನ್ನು ಮುಚ್ಚಲಾಗುವುದು~ ಎಂದು ಹೇಳಿದರು.
ಪ್ರತಿ ವಾರ್ಡ್‌ನಲ್ಲಿ ಐದು ಟನ್ ಕಸ ಸಂಸ್ಕರಣಾ ಸಾಮರ್ಥ್ಯದ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.