ADVERTISEMENT

ಬಿಬಿಎಂಪಿಯಿಂದ ವಿಧಾನಸೌಧದತ್ತ...

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2013, 19:46 IST
Last Updated 15 ಏಪ್ರಿಲ್ 2013, 19:46 IST

ಬೆಂಗಳೂರು: ಬಿಬಿಎಂಪಿ `ತೊರೆ'ಯಿಂದ ವಿಧಾನಸೌಧದ `ನದಿ' ಸೇರಲು ಒಂಬತ್ತು ಜನ ಕಾರ್ಪೋರೇಟರ್‌ಗಳು ಪ್ರಯತ್ನ ಆರಂಭಿಸಿದ್ದು, ವಿವಿಧ ಪಕ್ಷಗಳಿಂದ ಟಿಕೆಟ್ ಗಿಟ್ಟಿಸಿದ್ದಾರೆ. ಮೇಯರ್ ಡಿ.ವೆಂಕಟೇಶಮೂರ್ತಿ ಅವರೂ ಆ ಹುದ್ದೆಯಲ್ಲಿ ಇದ್ದುಕೊಂಡೇ ಸ್ಪರ್ಧೆಗೆ ಇಳಿದಿದ್ದು ವಿಶೇಷವಾಗಿದೆ. ಟಿಕೆಟ್ ಸಿಗದ ಇಬ್ಬರು ಸದಸ್ಯರು ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿದ್ದಾರೆ.

ಮೇಯರ್ ಹುದ್ದೆ ಅವಧಿ ಪೂರ್ಣಗೊಳಿಸುವ ಹಂತದಲ್ಲಿ ಇರುವ ವೆಂಕಟೇಶಮೂರ್ತಿ ಅವರಿಗೆ ಬಿಜೆಪಿ ಶಾಂತಿನಗರ ಕ್ಷೇತ್ರದಿಂದ ಟಿಕೆಟ್ ನೀಡಿದೆ. ಜೆಡಿಎಸ್‌ನಿಂದ ಟಿಕೆಟ್ ಸಾಕಷ್ಟು ಪ್ರಯಾಸಪಟ್ಟಿದ್ದ ಬಿಬಿಎಂಪಿ ಸದಸ್ಯ ಪದ್ಮನಾಭರೆಡ್ಡಿ, ಅದಕ್ಕೆ ಮನ್ನಣೆ ಸಿಗದಿದ್ದರಿಂದ ಪಕ್ಷ ತೊರೆದು ಬಿಜೆಪಿ ಸೇರ್ಪಡೆ ಆಗಿದ್ದಾರೆ. ಸರ್ವಜ್ಞನಗರದಿಂದ ಅವರಿಗೆ ಟಿಕೆಟ್ ಸಿಕ್ಕಿದೆ. ಈ ಹಿಂದೆ ಉಪ ಮೇಯರ್ ಆಗಿದ್ದ ಎಸ್. ಹರೀಶ್ ಮಹಾಲಕ್ಷ್ಮಿ ಲೇಔಟ್‌ನಿಂದ ಬಿಜೆಪಿ ಪರವಾಗಿ ಅಖಾಡಕ್ಕೆ ಇಳಿದಿದ್ದಾರೆ. ಚಾಮರಾಜಪೇಟೆಯಿಂದ ಆ ಪಕ್ಷ ಬಿಬಿಎಂಪಿ ಸದಸ್ಯ ಬಿ.ವಿ. ಗಣೇಶ್ ಅವರಿಗೆ ಟಿಕೆಟ್ ನೀಡಿದೆ. ಹಾಗೆಯೇ ಎಚ್. ರವೀಂದ್ರ ಗೋವಿಂದರಾಜನಗರದಿಂದ ಬಿಜೆಪಿಯಿಂದ ಸ್ಪರ್ಧೆಗೆ ಧುಮುಕಿದ್ದಾರೆ.

ಕಾಂಗ್ರೆಸ್‌ನ ಭೈರತಿ ಬಸವರಾಜು ಕೆ.ಆರ್. ಪುರದಿಂದ ಸ್ಪರ್ಧಿಸಲು ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಮನಿರ್ದೇಶಿತ ಸದಸ್ಯ ಆರ್. ಶರಶ್ಚಂದ್ರ ಬೊಮ್ಮನಹಳ್ಳಿ ಕ್ಷೇತ್ರದಿಂದ ಜೆಡಿಎಸ್ ಪರವಾಗಿ ಸ್ಪರ್ಧಿಸಲು ಅವಕಾಶ ಪಡೆದಿದ್ದಾರೆ. ಟಿಕೆಟ್ ಸಿಗದೆ ನಿರಾಸೆಗೊಂಡ ಗೋವಿಂದಗೌಡ (ಜೆಡಿಎಸ್) ದಾಸರಹಳ್ಳಿಯಿಂದ ಮತ್ತು ಮಲ್ಲೇಶ್ (ಕಾಂಗ್ರೆಸ್) ಗಾಂಧಿನಗರದಿಂದ ಬಂಡಾಯ ಅಭ್ಯರ್ಥಿಗಳಾಗಿ ಕಣದಲ್ಲಿದ್ದಾರೆ. ತಿಮ್ಮನಂಜಯ್ಯ ಮತ್ತು ಮುನಿರತ್ನ ಸಹ ಟಿಕೆಟ್ ನಿರೀಕ್ಷೆಯಲ್ಲಿ ಇದ್ದಾರೆ.ಸೋಮವಾರವಷ್ಟೇ ಪಕ್ಷದಿಂದ ಬಿ ಫಾರ್ಮ್ ಪಡೆದಿರುವ ವೆಂಕಟೇಶಮೂರ್ತಿ ತಮಗಾದ ಹರ್ಷವನ್ನು ಮುಚ್ಚಿಡಲಿಲ್ಲ.

`ಬುಧವಾರ ನಾಮಪತ್ರ ಸಲ್ಲಿಸಲಿದ್ದೇನೆ' ಎಂದು ಹರ್ಷದಿಂದಲೇ ಹೇಳಿಕೊಂಡರು. ಇನ್ನಷ್ಟು ವಿಶಾಲ ಕಾರ್ಯವ್ಯಾಪ್ತಿ ಹೊಂದಿ ಸಮಾಜ ಸೇವೆ ಮಾಡಬಹುದು ಎಂದು ಬಹುತೇಕ ಅಭ್ಯರ್ಥಿಗಳು ಹೇಳುತ್ತಾರೆ. `ಸ್ಪರ್ಧೆ ತುರುಸಿನಿಂದ ಕೂಡಿದ್ದು, ಬಿಬಿಎಂಪಿ ಸದಸ್ಯರಾಗಿ ಮಾಡಿದ ಕಾರ್ಯಗಳೇ ಶ್ರೀರಕ್ಷೆಯಾಗಿವೆ' ಎಂದು ನುಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.