ADVERTISEMENT

ಬಿಬಿಎಂಪಿಯಿಂದ ಸ್ಮಾರ್ಟ್‌ ಪಾರ್ಕಿಂಗ್‌ಗೆ ಸಿದ್ಧತೆ: ಮಹಿಳೆಯರಿಗೆ ಶೇ 20ರಷ್ಟು ಮೀಸಲು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 19:58 IST
Last Updated 23 ಅಕ್ಟೋಬರ್ 2017, 19:58 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೊಳ್ಳುವ ರಸ್ತೆಗಳಲ್ಲಿ ಮಹಿಳೆಯರಿಗೆ ಶೇ 20ರಷ್ಟು ಪಾರ್ಕಿಂಗ್‌ ಜಾಗಗಳನ್ನು ಮೀಸಲಿಡುವ ಕುರಿತು ಬಿಬಿಎಂಪಿ ಚಿಂತನೆ ನಡೆಸಿದೆ. ಪ್ರಾಯೋಗಿಕವಾಗಿ ಚರ್ಚ್‌ಸ್ಟ್ರೀಟ್‌ನಲ್ಲಿ ಜಾರಿಗೊಳಿಸಲು ಮುಂದಾಗಿದೆ.

‘ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಈ ಕ್ರಮ ಕೈಗೊಂಡಿದ್ದೇವೆ. ಸ್ಮಾರ್ಟ್‌ ಪಾರ್ಕಿಂಗ್‌ಗೆ ಸಂಬಂಧಿಸಿದಂತೆ ತಾಂತ್ರಿಕ ಹಾಗೂ ಹಣಕಾಸಿನ ಬಿಡ್‌ ಪೂರ್ಣಗೊಂಡಿದೆ. ಮುಂದಿನ ಕೌನ್ಸಿಲ್‌ ಸಭೆಯಲ್ಲಿ ಅನುಮತಿ ಪಡೆಯುತ್ತೇವೆ’ ಎಂದು ಮೇಯರ್‌ ಆರ್‌.ಸಂಪತ್‌ ರಾಜ್‌ ತಿಳಿಸಿದರು.

ವಾಹನ ನಿಲುಗಡೆಗಾಗಿ ಶುಲ್ಕ ವಿಧಿಸುವ ವ್ಯವಸ್ಥೆಯನ್ನು ಜಾರಿಗೊಳಿಸಲು 2013ರಲ್ಲಿ ಕೌನ್ಸಿಲ್‌ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. 2014 ಮತ್ತು 2015ರಲ್ಲಿ ಟೆಂಡರ್‌ ಕರೆಯಲಾಗಿತ್ತು. ಆದರೆ, ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿರಲಿಲ್ಲ. ಈ ವರ್ಷ ಮೂರನೇ ಬಾರಿಗೆ ಟೆಂಡರ್‌ ಕರೆಯಲಾಗಿತ್ತು.

ADVERTISEMENT

‘ಬೆಂಗಳೂರು ಮೂಲದ ನವೋದ್ಯಮ ‘ಕೇಂದ್ರೀಯ ಪಾರ್ಕಿಂಗ್‌ ವ್ಯವಸ್ಥೆ’ ಸಂಸ್ಥೆಯು ಗುತ್ತಿಗೆ ಪಡೆದಿದೆ. ಇದು ಮಹಾರಾಷ್ಟ್ರದ ಥಾಣೆ, ಮಧ್ಯಪ್ರದೇಶದ ಇಂದೋರ್‌ನಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ನಿರ್ವಹಣೆ ಮಾಡುತ್ತಿದೆ’ ಎಂದು ಬಿಬಿಎಂಪಿ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

ಸಂಸ್ಥೆಯು ಸಾರ್ವಜನಿಕ–ಖಾಸಗಿ ಸಹಭಾಗಿತ್ವದಲ್ಲಿ ಮೂಲಸೌಕರ್ಯ ಹಾಗೂ ಮೊಬೈಲ್‌ ಆ್ಯಪ್‌ ಅನ್ನು ಅಭಿವೃದ್ಧಿ ಪಡಿಸುತ್ತಿದೆ. ಪಾಲಿಕೆಗೆ ವಾರ್ಷಿಕ ₹31.5 ಕೋಟಿ ಬಾಡಿಗೆ ಪಾವತಿಸಲಿದೆ.

ನಗರದಲ್ಲಿ ಶುಲ್ಕ ಪಾವತಿಸಿ ವಾಹನ ನಿಲುಗಡೆಗೆ 85 ರಸ್ತೆಗಳನ್ನು ಗುರುತಿಸಲಾಗಿದೆ. ಈ ರಸ್ತೆಗಳನ್ನು ಎ (ಪ್ರೀಮಿಯಂ), ಬಿ (ವಾಣಿಜ್ಯ) ಮತ್ತು ಸಿ (ಸಾಮಾನ್ಯ) ಎಂಬ ಮೂರು ಪಾರ್ಕಿಂಗ್‌ ಪ್ಯಾಕೇಜ್‌­ಗಳಲ್ಲಿ ವಿಂಗಡಿಸ­ಲಾಗಿದೆ. ‘ಎ’ ಪ್ಯಾಕೇಜ್‌ನಲ್ಲಿ 14 ರಸ್ತೆಗಳು, ‘ಬಿ’ ಪ್ಯಾಕೇಜ್‌ನಲ್ಲಿ 25 ರಸ್ತೆಗಳು ಹಾಗೂ ‘ಸಿ’ ಪ್ಯಾಕೇಜ್‌ನಲ್ಲಿ 46 ರಸ್ತೆಗಳು ಒಳಗೊಂಡಿವೆ.

ವಾಹನ ಚಾಲಕರು ಮೊಬೈಲ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು, ಪಾರ್ಕಿಂಗ್‌ ತಾಣ ಹಾಗೂ ಖಾಲಿ ಇರುವ ಸ್ಥಳದ ಬಗ್ಗೆ ಮಾಹಿತಿ ಪಡೆಯಬಹುದು ಹಾಗೂ ಸ್ಥಳವನ್ನು ಕಾಯ್ದಿರಿಸಬಹುದು. ಈ ಸ್ಥಳದಲ್ಲಿ ನಿಲುಗಡೆ ಮಾಡಲು 10 ನಿಮಿಷಗಳ ಕಾಲಾವಕಾಶ ಇರುತ್ತದೆ. ಮೊಬೈಲ್‌ ಆ್ಯಪ್‌ ಮೂಲಕ ಕಾಯ್ದಿರಿಸದೆಯೂ ಈ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡಬಹುದು.

ಪಾರ್ಕಿಂಗ್‌ ತಾಣಗಳಲ್ಲಿ ಸೆನ್ಸರ್‌ಗಳನ್ನು ಜೋಡಿಸಿ, ಮೀಟರ್‌ ಅಳವಡಿಸಲಾಗುತ್ತದೆ. ವಾಹನ ಬಂದ ಸಮಯ, ಎಷ್ಟು ಸಮಯ ಇತ್ತು ಎಂಬ ಸಮಗ್ರ ಮಾಹಿತಿ ಅದರಲ್ಲಿ ದಾಖಲಾಗುತ್ತದೆ. ಆ್ಯಪ್‌ ಮೂಲಕವೂ ಶುಲ್ಕ ಪಾವತಿಸಬಹುದು.

**

ಅಂಕಿ–ಅಂಶ

3,600: ಈ ರಸ್ತೆಗಳಲ್ಲಿ ನಿಲುಗಡೆ ಮಾಡಬಹುದಾದ ಕಾರುಗಳು

10,000: ನಿಲುಗಡೆ ಮಾಡಬಹುದಾದ ದ್ವಿಚಕ್ರ ವಾಹನಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.