ADVERTISEMENT

ಬಿಬಿಎಂಪಿ ವ್ಯಾಪ್ತಿಯ 33 ಪ್ರೌಢ ಶಾಲೆಗಳು: 6 ವಿದ್ಯಾರ್ಥಿಗಳಿಗೆ ಅಗ್ರ ಶ್ರೇಣಿ

​ಪ್ರಜಾವಾಣಿ ವಾರ್ತೆ
Published 18 ಮೇ 2012, 19:40 IST
Last Updated 18 ಮೇ 2012, 19:40 IST

ಬೆಂಗಳೂರು: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 33 ಪ್ರೌಢಶಾಲೆಗಳಲ್ಲಿ ಶೇ 56.31ರಷ್ಟು ಫಲಿತಾಂಶ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಫಲಿತಾಂಶದಲ್ಲಿ ಕೇವಲ ಶೇ 0.33ರಷ್ಟು ಇಳಿಕೆ ಕಂಡು ಬಂದಿದೆ.

2011ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 56.64 ಫಲಿತಾಂಶ ದಾಖಲಾದರೆ, ಈ ವರ್ಷ ಶೇ 56.31ರಷ್ಟು ಫಲಿತಾಂಶ ಬಂದಿದೆ. ಪರೀಕ್ಷೆಗೆ ಹಾಜರಾದ ಒಟ್ಟು 2044 ವಿದ್ಯಾರ್ಥಿಗಳಲ್ಲಿ 1151 ಮಂದಿ ಉತ್ತೀರ್ಣರಾಗಿದ್ದು, ಆರು ಮಂದಿ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಸಾಧಿಸಿದ್ದಾರೆ. 213 ವಿದ್ಯಾರ್ಥಿಗಳು ಪ್ರಥಮ ದರ್ಜೆ, 279 ಮಂದಿ ದ್ವಿತೀಯ ಹಾಗೂ 653 ಮಂದಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿಜಯನಗರ ಪಾಲಿಕೆ ಪ್ರೌಢಶಾಲೆಯು ಅತ್ಯಧಿಕ ಶೇ 88 ಫಲಿತಾಂಶ ಪಡೆದು ಪ್ರಥಮ ಸ್ಥಾನದಲ್ಲಿದ್ದರೆ, ಜೋಗುಪಾಳ್ಯ ಪ್ರೌಢಶಾಲೆ ಶೇ 14ರಷ್ಟು ಅತಿ ಕಡಿಮೆ ಫಲಿತಾಂಶ ದಾಖಲಿಸಿ ಕೊನೇ ಸ್ಥಾನದಲ್ಲಿದೆ.

ಶ್ರೀರಾಮಪುರ ಪ್ರೌಢಶಾಲೆ ಶೇ 86, ಕೆ.ಜಿ.ನಗರ ಪ್ರೌಢಶಾಲೆ ಶೇ 85, ಮತ್ತಿಕೆರೆ ಪ್ರೌಢಶಾಲೆ ಶೇ 83, ಬೈರವೇಶ್ವರನಗರ ಪ್ರೌಢಶಾಲೆ ಶೇ 83, ಗಂಗಾನಗರ ಪ್ರೌಢಶಾಲೆ ಶೇ 80ರಷ್ಟು ಉತ್ತಮ ಫಲಿತಾಂಶ ಪಡೆದಿವೆ.

ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರು: ಶ್ರೀರಾಮಪುರ ಪ್ರೌಢಶಾಲೆಯ ಎಸ್. ಸವಿತಾ ಶೇ 97.60ರಷ್ಟು ಅಂಕ ಪಡೆಯುವ ಮೂಲಕ ಪ್ರಥಮ ಸ್ಥಾನ ಪಡೆದಿದ್ದಾರೆ. 625ಕ್ಕೆ 610 ಅಂಕ ಪಡೆಯುವ ಮೂಲಕ ಈ ವಿದ್ಯಾರ್ಥಿನಿ ರಾಜ್ಯಮಟ್ಟದಲ್ಲಿ ಒಂಬತ್ತನೇ ಸ್ಥಾನ ಪಡೆದಿದ್ದಾಳೆ.

ಇದೇ ಶಾಲೆಯ ಧನಶ್ರೀ ದ್ವಿತೀಯ (ಶೇ 91.6), ವಿಜಯನಗರದ ಅಫ್ರೀನ್ ಅಂಜುಮ್ ತೃತೀಯ (ಶೇ 90.24), ಕ್ಲೀವ್‌ಲ್ಯಾಂಡ್ ಟೌನ್‌ನ ಅರ್ಷಿಯಾ ಬೇಗಂ ನಾಲ್ಕನೇ ಸ್ಥಾನ (ಶೇ 88.48), ಶ್ರೀರಾಮಪುರ ಪ್ರೌಢಶಾಲೆಯ ಆರ್. ಮೇಘನಾ ಐದನೇ ಸ್ಥಾನ (ಶೇ 87) ಹಾಗೂ ಮತ್ತಿಕೆರೆ ಪ್ರೌಢಶಾಲೆಯ ಎ. ದಿವ್ಯಶ್ರೀ ಆರನೇ ಸ್ಥಾನ (ಶೇ 85.8) ಪಡೆದಿದ್ದಾರೆ.

ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಈ ಆರು ಮಂದಿ ವಿದ್ಯಾರ್ಥಿಗಳಿಗೆ ಪಾಲಿಕೆ ವತಿಯಿಂದ 25 ಸಾವಿರ ರೂಪಾಯಿ ಪ್ರೋತ್ಸಾಹಧನ ನೀಡುವುದಾಗಿ ಮೇಯರ್ ಡಿ. ವೆಂಕಟೇಶಮೂರ್ತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.