ಬೆಂಗಳೂರು: ಹಲಸೂರಿನ ಜೋಗು ಪಾಳ್ಯದಲ್ಲಿರುವ ಬಿಬಿಎಂಪಿ ಸಂಯುಕ್ತ ಬಾಲಕಿಯರ ಶಾಲೆ ಮತ್ತು ಕಾಲೇಜನ್ನು ನಗರದಲ್ಲಿರುವ ಇಸ್ರೇಲ್ ಕಾನ್ಸಲೇಟ್, ರೋಟರಿ ಕಂಟೋನ್ಮೆಂಟ್ ಬೆಂಗಳೂರು ಮತ್ತು ಫಸ್ಟ್ ಲೇಡಿಸ್ ಫೋರಂ ಸಹಯೋಗದಲ್ಲಿ ಗುರುವಾರ ದತ್ತು ಪಡೆಯಿತು.
ಕಾರ್ಯಕ್ರಮದಲ್ಲಿ ಇಸ್ರೇಲ್ ಕಾನ್ಸಲ್ ಜನರಲ್ ಮೆನಹೆಮ್ ಕನಾಫಿ ಮಾತನಾಡಿ, ‘ಜ್ಞಾನಾಧಾರಿತ ಆರ್ಥಿಕ ವ್ಯವಸ್ಥೆ ಹೊಂದಿರುವ ಭಾರತ ಮತ್ತು ಇಸ್ರೇಲ್ ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ನೀಡುತ್ತಿವೆ. ನಗರದಲ್ಲಿರುವ ಕಾನ್ಸಲೇಟ್ ಕಚೇರಿ ಕೇವಲ ಕಚೇರಿ ಮಟ್ಟದ ಕೆಲಸಗಳನ್ನು ಮಾಡುವುದು ಮಾತ್ರವಲ್ಲದೇ, ದೇಶದ ಭವಿಷ್ಯ ಉಜ್ವಲಗೊಳಿಸುವ ಕಾರ್ಯಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ತನ್ನನ್ನು ತೊಡಗಿಸಿಕೊಂಡಿದೆ’ ಎಂದು ತಿಳಿಸಿದರು.
ಡೆಪ್ಯೂಟಿ ಕಾನ್ಸಲ್ ಜನರಲ್ ಜಿವ್ ಶಾಲ್ವಿ ಮಾತನಾಡಿ, ‘ಇಸ್ರೇಲ್ ಸರ್ಕಾರ ದೇಶ ಮತ್ತು ಹೊರದೇಶಗಳಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಉತ್ತೇಜಿಸಲು ಹಲವಾರು ಯೋಜನೆ ಹಮ್ಮಿಕೊಂಡಿದೆ. ಅದರ ಭಾಗವಾಗಿ ಈ ಶಾಲೆಯಲ್ಲಿ ಶೌಚಾಲಯ ನವೀಕರಿಸಿ, ಸಭಾಂಗಣ ವೇದಿಕೆ ನಿರ್ಮಾಣ ಮಾಡಲಾಗಿದೆ. ಜತೆಗೆ, ದೃಶ್ಯ ಪರದೆ, ಪ್ರೊಜೆಕ್ಟರ್ ಮತ್ತು ಲ್ಯಾಪ್‌ಟಾಪ್ ಒದಗಿಸಲಾಗಿದೆ’ ಎಂದು ಹೇಳಿದರು.
‘ಮುಂಬರುವ ದಿನಗಳಲ್ಲಿ ಶಾಲೆಗೆ ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸಿಕೊಡಲಾಗುತ್ತದೆ. ಕಾಲ ಕಾಲಕ್ಕೆ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ತರಬೇತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತದೆ’ ಎಂದರು.
ಶಾಲೆಯ ಪ್ರಾಂಶುಪಾಲ ಹರೀಶ್ ಕುಮಾರ ಮಾತನಾಡಿ, ‘ಕೆಲ ಮೂಲಸೌಕರ್ಯಗಳ ಕೊರತೆ ಇರುವ 50 ವರ್ಷದಷ್ಟು ಹಳೆಯದಾದ ಈ ಸಂಸ್ಥೆಯಲ್ಲಿ ಕೆಳ ವರ್ಗದ ವಿದ್ಯಾರ್ಥಿನಿಯರೇ ಅಧಿಕವಾಗಿ ಓದುತ್ತಿದ್ದಾರೆ. ಇದೀಗ ಇಸ್ರೇಲ್ ಕಾನ್ಸಲೇಟ್ ಸಹಾಯ ಮಾಡಲು ಮುಂದೆ ಬಂದಿರುವುದರಿಂದ ವಿದ್ಯಾರ್ಥಿಗಳಿಗೆ ಮತ್ತಷ್ಟು ಗುಣಮಟ್ಟದ ಶಿಕ್ಷಣ ನೀಡಲು ಅನುಕೂಲವಾಗಲಿದೆ’ ಎಂದು ಅಭಿಪ್ರಾಯಪಟ್ಟರು.
ರೋಟರಿ ಜಿಲ್ಲಾ ಗವರ್ನರ್ ಮಂಜುನಾಥ್ ಶೆಟ್ಟಿ ಮಾತನಾಡಿ, ‘ಆರೋಗ್ಯ ಮತ್ತು ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಮೂಲಕ ವಿಶ್ವಶಾಂತಿ ಮತ್ತು ಭ್ರಾತೃತ್ವ ಸಾಧಿಸುವ ಉದ್ದೇಶದಿಂದ ರೋಟರಿ ಅನೇಕ ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಶಾಲೆಗೆ ಅಗತ್ಯ ಮೂಲಸೌಕರ್ಯ ಒದಗಿಸುವ ಮೂಲಕ ಇಲ್ಲಿನ ಶಿಕ್ಷಣ ಗುಣಮಟ್ಟ ಹೆಚ್ಚಿಸುವುದು ನಮ್ಮ ಉದ್ದೇಶವಾಗಿದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.