ADVERTISEMENT

ಬಿಬಿಎಂಪಿ ಸದಸ್ಯನ ಮನೆ ಮೇಲೆ ದಾಳಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2013, 19:45 IST
Last Updated 14 ಏಪ್ರಿಲ್ 2013, 19:45 IST

ಬೆಂಗಳೂರು: ಮಹಾಲಕ್ಷ್ಮಿಲೇಔಟ್‌ನ ಗೆಳೆಯರ ಬಳಗದ ಬಳಿ ಇರುವ ಬಿಬಿಎಂಪಿ ಮಹಾಲಕ್ಷ್ಮಿಪುರ ವಾರ್ಡ್‌ನ (ವಾರ್ಡ್ ನಂ. 68) ಕಾಂಗ್ರೆಸ್ ಸದಸ್ಯ ಎಸ್. ಕೇಶವಮೂರ್ತಿ ಅವರ ನಿವಾಸದ ಮೇಲೆ ಕಿಡಿಗೇಡಿಗಳು ಶನಿವಾರ ರಾತ್ರಿ ಕಲ್ಲು ತೂರಾಟ ಮಾಡಿ ದಾಂಧಲೆ ನಡೆಸಿದ್ದಾರೆ.

ಈ ಘಟನೆ ನಡೆದ ಕೆಲವೇ ತಾಸುಗಳಲ್ಲಿ ಮಹಾಲಕ್ಷ್ಮಿಲೇಔಟ್ ಪೊಲೀಸರು ಪ್ರಕರಣದ ಪ್ರಮುಖ ಆರೋಪಿ ಮುನೇಶ್ವರಬ್ಲಾಕ್‌ನ ಕುಮಾರ್ ಅಲಿಯಾಸ್ ಭಾಗ್ಯನಾಥ್ (43) ಎಂಬಾತನನ್ನು ಬಂಧಿಸಿದ್ದಾರೆ.

ಕೇಶವಮೂರ್ತಿ ಅವರು ಮಗನ ಜತೆ ರಾತ್ರಿ ಹೊರಗೆ ಹೋಗಿದ್ದ ಸಂದರ್ಭದಲ್ಲಿ ಅವರ ಮನೆಯ ಬಳಿ ಪಾನಮತ್ತರಾಗಿ ಬಂದಿದ್ದ ಕುಮಾರ್ ಮತ್ತು ಸಹಚರರು ಹೂ ಕುಂಡಗಳನ್ನು ಒಡೆದು ಹಾಕಿದ್ದಾರೆ. ಅಲ್ಲದೇ, ಮನೆಯ ಕಿಟಕಿ ಗಾಜಿಗೆ ಕಲ್ಲು ತೂರಿದ್ದಾರೆ. ಈ ವೇಳೆ ಮನೆಯಿಂದ ಹೊರ ಬಂದ ಕೇಶವಮೂರ್ತಿ ಅವರ ಪತ್ನಿ ಚೇತನಾ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಚಾಕುವಿನಿಂದ ಹಲ್ಲೆ ನಡೆಸಲು ಯತ್ನಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಚೇತನಾ ಅವರ ನೆರವಿಗೆ ಧಾವಿಸಿದ ಮನೆಯ ಮಾಲೀಕರಾದ ಕೆಂಪಣ್ಣ ಅವರ ಮೇಲೂ ಆರೋಪಿಗಳು ಹಲ್ಲೆ ಮಾಡಲೆತ್ನಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಹೋಗುವಷ್ಟರಲ್ಲಿ ಕುಮಾರ್ ಸಹಚರರೊಂದಿಗೆ ಪರಾರಿಯಾಗಿದ್ದ. ನಂತರ ಆತನ ಮೊಬೈಲ್ ಕರೆಗಳ ಮಾಹಿತಿ ಆಧರಿಸಿ ಬಂಧಿಸಲಾಯಿತು. ಆತನ ವಿರುದ್ಧ ಕೊಲೆ ಯತ್ನ ಹಾಗೂ ಆಸ್ತಿಗೆ ಹಾನಿ ಉಂಟು ಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕುಮಾರ್, ನಿವೃತ್ತ ಎಸ್‌ಐ ಒಬ್ಬರ ಪುತ್ರ. ಅಲ್ಲದೇ, ಆತನ ಅಣ್ಣ ಮಲ್ಲೇಶ್ವರ ಠಾಣೆಯಲ್ಲಿ ಹೆಡ್ ಕಾನ್‌ಸ್ಟೆಬಲ್ ಆಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇಶವಮೂರ್ತಿ ಅವರು ಅಧ್ಯಕ್ಷರಾಗಿರುವ ರಾಜಾಜಿನಗರದಲ್ಲಿನ ಸಿಟಿಜನ್ ಸಹಕಾರಿ ಬ್ಯಾಂಕ್‌ನಲ್ಲಿ ಕುಮಾರ್ ಆರು ವರ್ಷಗಳ ಹಿಂದೆ ್ಙ 50 ಸಾವಿರ ಸಾಲ ತೆಗೆದುಕೊಂಡಿದ್ದ. ಆ ಸಾಲದ ಹಣವನ್ನು ಆತ ಮರುಪಾವತಿ ಮಾಡಿರಲಿಲ್ಲ. ಈ ಕಾರಣಕ್ಕಾಗಿ ಆತನ ಮನೆಯನ್ನು ಜಪ್ತಿ ಮಾಡಲು       ಬ್ಯಾಂಕ್‌ನಿಂದ ಕೆಲ ದಿನಗಳ ಹಿಂದೆ ನೋಟಿಸ್ ಹೊರಡಿಸಲಾಗಿತ್ತು.

ಈ ವಿಷಯವಾಗಿ ಕುಮಾರ್ ಮತ್ತು ಕೇಶವಮೂರ್ತಿ ನಡುವೆ ವಾಗ್ವಾದ ನಡೆದಿತ್ತು. ಇದರಿಂದ ಕೋಪಗೊಂಡಿದ್ದ ಆತ ಸಹಚರರ ಜತೆ ಸೇರಿಕೊಂಡು ಈ ರೀತಿ ದಾಂಧಲೆ ನಡೆಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.