ADVERTISEMENT

ಬಿಬಿಎಂಪಿ: 467 ಕೋಟಿ ಅಕ್ರಮ ಕಾಮಗಾರಿ- ಆರೋಪ

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 19:30 IST
Last Updated 19 ಜನವರಿ 2012, 19:30 IST

ಬೆಂಗಳೂರು: ಸರ್ಕಾರದ ಅನುಮೋದನೆ ಇಲ್ಲದೇ 467 ಕೋಟಿ ರೂಪಾಯಿ ಬೃಹತ್ ಮೊತ್ತದ ಕಾಮಗಾರಿಗಳನ್ನು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ಸಂಸ್ಥೆಗೆ (ಕೆಆರ್‌ಐಡಿಎಲ್) ನೀಡುವ ಮೂಲಕ ಭಾರಿ ಅಕ್ರಮ ನಡೆಸಲಾಗಿದೆ ಎಂದು ಕಾಂಗ್ರೆಸ್‌ನ ಹಿರಿಯ ಸದಸ್ಯ ಕೆ. ಚಂದ್ರಶೇಖರ್ ಮಾಡಿದ ಗಂಭೀರ ಆರೋಪ ಗುರುವಾರ ನಡೆದ ಪಾಲಿಕೆ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು.

ಬಿಬಿಎಂಪಿಯ ಪೌರ ಸಭಾಂಗಣದಲ್ಲಿ ಮೇಯರ್ ಪಿ. ಶಾರದಮ್ಮ ಅಧ್ಯಕ್ಷತೆಯಲ್ಲಿ ನಡೆದ ಚುಕ್ಕೆ ಗುರುತಿನ ಪ್ರಶ್ನೆಗಳ ಕುರಿತ ಚರ್ಚೆಯಲ್ಲಿ ಚಂದ್ರಶೇಖರ್ ದಾಖಲೆಗಳನ್ನು ಪ್ರದರ್ಶಿಸಿ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ನೀಡಿದರು.

`ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಟಿಪಿ) ಕಾಯ್ದೆಯ 4ಜಿ ನಿಯಮದ ಪ್ರಕಾರ ತುರ್ತು ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ. ಈ ನಿಯಮವನ್ನೇ ಆಧಾರ ಮಾಡಿಕೊಂಡು ಅಧಿಕಾರಿಗಳು ಸಾಕಷ್ಟು ಅವ್ಯವಹಾರ ನಡೆಸಿದ್ದಾರೆ~ ಎಂದು ಚಂದ್ರಶೇಖರ್ ಆರೋಪಿಸಿದರು.

`2009-10ನೇ ಸಾಲಿನಲ್ಲಿ ತುರ್ತು ಕಾಮಗಾರಿ ಹೆಸರಿನಲ್ಲಿ ಒಟ್ಟು 483 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ನಡೆಸಲಾಗಿದೆ. ಮೊದಲ ಹಂತದಲ್ಲಿ 183 ಕೋಟಿ ರೂಪಾಯಿ ಹಾಗೂ ಎರಡನೇ ಹಂತದಲ್ಲಿ 300 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳನ್ನು ನಡೆಸಲಾಗಿದೆ~ ಎಂದರು.

`ಈ ಪೈಕಿ 16 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು 13-05-2010ರಿಂದ 01-07-2010ರ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸರ್ಕಾರದ ಸೂಚನೆ ಇತ್ತು. ಆದರೂ ಅವಧಿ ಮೀರಿ ಈ ಕಾಮಗಾರಿಗಳನ್ನು ನಡೆಸಲಾಗಿದೆ. ಹಾಗಾಗಿ ಇವುಗಳ ತುರ್ತು ಅಗತ್ಯವಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಈ 483 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳ ಪೈಕಿ ಶೇ 80ರಷ್ಟು ಕಾಮಗಾರಿಗಳನ್ನು 2010-11ನೇ ಸಾಲಿನ ಕಾಮಗಾರಿಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಹಾಗಾದರೆ 2009-10ನೇ ಸಾಲಿನಲ್ಲಿ ಈ ಕಾಮಗಾರಿಗಳು ನಡೆದಿರಲಿಲ್ಲವೇ ಎಂಬ ಅನುಮಾನ ಮೂಡಿದೆ~ ಎಂದು ಸಂಶಯ ವ್ಯಕ್ತಪಡಿಸಿದರು.

`ಒಂದೂವರೆ ತಿಂಗಳಲ್ಲಿ 16 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಕೇವಲ ಒಂದೂವರೆ ತಿಂಗಳಲ್ಲಿ ಇಷ್ಟು ದೊಡ್ಡ ಮೊತ್ತದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಧ್ಯವೇ~ ಎಂದು ಪ್ರಶ್ನಿಸಿದರು.

`ತುರ್ತು ಕಾಮಗಾರಿಯಡಿ ತೋಟಗಾರಿಕೆ ವಿಭಾಗದ ಯಾವುದೇ ಕಾಮಗಾರಿ ಕೈಗೊಳ್ಳುವಂತಿಲ್ಲ. ಆದರೆ, 13 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಯನ್ನು ತೋಟಗಾರಿಕೆ ವಿಭಾಗದಲ್ಲಿ ಕೈಗೊಳ್ಳಲಾಗಿದೆ. ಪೂರ್ವ ವಿಭಾಗದಲ್ಲಿ ಒಂದು ಕೋಟಿ ರೂಪಾಯಿ ಮೊತ್ತದ ಕೆಲಸವನ್ನಷ್ಟೇ ನಿರ್ವಹಿಸಬೇಕು ಎಂಬ ಸರ್ಕಾರದ ಸೂಚನೆಯಿದ್ದರೂ ಅಕ್ರಮವಾಗಿ ರೂ 10 ಕೋಟಿ ಮೊತ್ತದ ಕಾಮಗಾರಿ ನಡೆಸಲಾಗಿದೆ~ ಎಂದರು.

`2009-10ನೇ ಸಾಲಿನಲ್ಲಿ ತುರ್ತು ಕಾಮಗಾರಿ ಹೆಸರಿನಲ್ಲಿ ಕೈಗೊಂಡ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ಮಾಹಿತಿಯಲ್ಲಿನ ಅಂಕಿ-ಅಂಶ ಹಾಗೂ ಪಾಲಿಕೆ ಅಧಿಕಾರಿಗಳು ನೀಡಿರುವ ಅಂಕಿ-ಅಂಶಗಳಲ್ಲೇ ಸಾಕಷ್ಟು ವ್ಯತ್ಯಾಸಗಳಿವೆ. ಪಾಲಿಕೆ ಅಧಿಕಾರಿಗಳೇ ನೀಡಿರುವ ಮಾಹಿತಿಯಲ್ಲಿ ವ್ಯತ್ಯಾಸವಿರುವುದು ಅನುಮಾನ ಮೂಡಿಸಿದೆ~ ಎಂದರು.

`ಸರ್ಕಾರದ ಅನುಮೋದನೆ ಇಲ್ಲದೇ 483 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳನ್ನು ಕೈಗೊಂಡಿರುವುದು, ನಿಗದಿತ ಅವಧಿಯೊಳಗೆ ಕೆಲಸ ಪೂರ್ಣಗೊಳಿಸದಿರುವುದು. ಶೇ 80ರಷ್ಟು ಕಾಮಗಾರಿಗಳನ್ನು 2010-11ನೇ ಸಾಲಿನ ಕಾಮಗಾರಿ ಪಟ್ಟಿಯಲ್ಲಿ ಸೇರಿಸಿರುವುದನ್ನು ಗಮನಿಸಿದರೆ ದೊಡ್ಡ ಅಕ್ರಮ ನಡೆದಿರುವ ಸಾಧ್ಯತೆ ಇದೆ. ಇದಕ್ಕೆ ಆಯುಕ್ತರು ಮಾಹಿತಿ ನೀಡಬೇಕು~ ಎಂದು ಕೋರಿದರು.

ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ, `ವಿವಿಧ ಕಾಮಗಾರಿಗಳನ್ನು ಕೆಆರ್‌ಐಡಿಎಲ್‌ಗೆ ವಹಿಸುವ ಬಗ್ಗೆ ಸರ್ಕಾರದ ವಿವಿಧ ಆದೇಶಗಳಿವೆ. ಈ ಬಗ್ಗೆ ಪರಿಶೀಲಿಸಲಾಗುವುದು. ಒಮ್ಮೆ ಕೈಗೊಂಡ ಕಾಮಗಾರಿಗಳನ್ನು ಮತ್ತೆ ಹೊಸ ಕಾಮಗಾರಿ ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು~ ಎಂದರು.

ಇದಕ್ಕೆ ತೃಪ್ತರಾಗದ ಚಂದ್ರಶೇಖರ್, `ಈ ಬಗ್ಗೆ ಸರಿಯಾದ ವಿವರಣೆ ನೀಡಬೇಕು. ನಾನು ನೀಡಿರುವ ಮಾಹಿತಿ ಸುಳ್ಳಾದರೆ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ~ ಎಂದು ಸವಾಲು ಹಾಕಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿಯ ಪಿ.ಎನ್. ಸದಾಶಿವ, `ಚಂದ್ರಶೇಖರ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗಳ ಬಗ್ಗೆ ಸಭೆಗೆ ಮಾಹಿತಿ ಇಲ್ಲ. ಸರ್ಕಾರದ ಅನುಮೋದನೆ ನಿರೀಕ್ಷೆಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಬೇಕಾಗುತ್ತದೆ. ಅವರ ಸಂದೇಹಗಳಿಗೆ ನಾನು ಉತ್ತರ ನೀಡುತ್ತೇನೆ~ ಎಂದರು. ಇದಕ್ಕೆ ಕಾಂಗ್ರೆಸ್‌ನ ಕೆಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಆಗ ಆಕ್ರೋಶಗೊಂಡ ಚಂದ್ರಶೇಖರ್, `ನಾನು ಮತ್ತು ಸದಾಶಿವ ಇಬ್ಬರು ಖಾಲಿ ಹಾಳೆಯ ಮೇಲೆ ಸಹಿ ಹಾಕೋಣ. ಯಾರು ತಪ್ಪು ಮಾಹಿತಿ ನೀಡಿದ್ದಾರೋ ಅವರ ರಾಜೀನಾಮೆ ಅಂಗೀಕಾರವಾಗಲಿ~ ಎಂದು ಸವಾಲು ಹಾಕಿದರು. ಬಳಿಕ ಮೇಯರ್ ಸಭೆಯನ್ನು ಶುಕ್ರವಾರಕ್ಕೆ ಮುಂದೂಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.