ADVERTISEMENT

ಬೆಂಗಳೂರಿನ ಜನರಿಗೆ ಲೆಕ್ಕ ಕೊಡಿ: ಬಿಜೆಪಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2018, 19:51 IST
Last Updated 1 ಮಾರ್ಚ್ 2018, 19:51 IST
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಸಿದ್ಧಪಡಿಸಿರುವ ಆರೋಪ ಪಟ್ಟಿಯನ್ನು ಪಕ್ಷದ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಬಿಡುಗಡೆ ಮಾಡಿದರು. ಶಾಸಕರಾದ ಆರ್. ಅಶೋಕ್, ಸುರೇಶ್ ಕುಮಾರ್, ಸಿ.ಎನ್. ಅಶ್ವತ್ಥ ನಾರಾಯಣ, ವೈ.ಎ. ನಾರಾಯಣಸ್ವಾಮಿ ಇದ್ದರು
ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಸಿದ್ಧಪಡಿಸಿರುವ ಆರೋಪ ಪಟ್ಟಿಯನ್ನು ಪಕ್ಷದ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಬಿಡುಗಡೆ ಮಾಡಿದರು. ಶಾಸಕರಾದ ಆರ್. ಅಶೋಕ್, ಸುರೇಶ್ ಕುಮಾರ್, ಸಿ.ಎನ್. ಅಶ್ವತ್ಥ ನಾರಾಯಣ, ವೈ.ಎ. ನಾರಾಯಣಸ್ವಾಮಿ ಇದ್ದರು   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಹಣ ಲೂಟಿ, ರಿಯಲ್ ಎಸ್ಟೇಟ್ ಮಾಫಿಯಾದ ತಾಂಡವ, ಕಾಂಗ್ರೆಸ್‌ ಬೆಂಬಲಿತ ಗೂಂಡಾಗಳ ದರ್ಬಾರು ಮಿತಿ ಮೀರಿದೆ ಎಂದು ಬಿಜೆಪಿ ಆಪಾದಿಸಿದೆ.

‘ಕನ್ನಡಿಗರಿಗೆ, ಬೆಂಗಳೂರಿನ ಜನರಿಗೆ ಲೆಕ್ಕ ಕೊಡಿ’ ಎಂಬ ಶೀರ್ಷಿಕೆಯಡಿ ಬಿಜೆಪಿ ನಗರ ಘಟಕ ಸಿದ್ಧಪಡಿಸಿರುವ 15 ಪುಟಗಳ ಆರೋಪ ‍ಪಟ್ಟಿಯನ್ನು ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಗುರುವಾರ ಬಿಡುಗಡೆ ಮಾಡಿದರು.

ಗೂಂಡಾರಾಜ್ಯ:

ADVERTISEMENT

ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಬೆಂಗಳೂರನ್ನು ನರಕವಾಗಿಸಿದ್ದಾರೆ. ಕಾಂಗ್ರೆಸ್ ನಾಯಕರಿಗೆ ಹಣದ ಬಗ್ಗೆ ಕಾಳಜಿ ಇದೆ ವಿನಾ ರಾಜಧಾನಿಯ ನೆಮ್ಮದಿಯ ವಾತಾವರಣ ನಿರ್ಮಿಸುವ, ಇಲ್ಲಿ ಮೂಲಸೌಕರ್ಯ ಕಲ್ಪಿಸುವ ಆಲೋಚನೆಯೇ ಇಲ್ಲ. ಶಿಸ್ತುಬದ್ಧ, ಸುರಕ್ಷಿತ ನಗರವಾಗಿದ್ದ ಬೆಂಗಳೂರು ಅಪರಾಧಿಗಳ ಸ್ವರ್ಗವಾಗಿದೆ. ಇತ್ತೀಚಿನ ದಿನಗಳಲ್ಲಿ ಗೂಂಡಾರಾಜ್ಯವಾಗಿ ಪರಿವರ್ತನೆಯಾಗಿದೆ ಎಂದು ಜಾವಡೇಕರ್ ಜರಿದರು.

ಕಾಂಗ್ರೆಸ್‌ ಶಾಸಕರಾದ ಹ್ಯಾರಿಸ್ ಪುತ್ರನ ದೌರ್ಜನ್ಯ, ಬಿ.ಎ. ಬಸವರಾಜ್‌ ಬೆಂಬಲಿಗ ನಾರಾಯಣ ಸ್ವಾಮಿಯಿಂದ ಪೆಟ್ರೋಲ್ ಚೆಲ್ಲಾಟ, ಪೊಲೀಸ್ ಅಧಿಕಾರಿಯ ಮನೆಯಲ್ಲೇ ಕಳವು, ಸಬ್ ಇನ್ಸ್‌ಪೆಕ್ಟರ್‌ ರಿವಾಲ್ವರ್‌ ಕಸಿದುಕೊಂಡ ಪ್ರಕರಣ, ಮಹಿಳಾ ಸಬ್ ಇನ್ಸ್‌ಪೆಕ್ಟರ್‌ ಮೇಲೆ ಗೂಂಡಾಗಳ ದೌರ್ಜನ್ಯ, ನಿಲ್ಲದ ಸರಗಳವು ಪ್ರಕರಣಗಳು ಗೂಂಡಾರಾಜ್ಯವಾಗಿ ಬದಲಾಗಿರುವುದಕ್ಕೆ ಸಾಕ್ಷಿಯಾಗಿದೆ. ಮಹಿಳೆಯರಿಗೆ ಸುರಕ್ಷಿತ ನಗರ ಎಂದು ಹೆಸರಾಗಿದ್ದ ಬೆಂಗಳೂರಿನಲ್ಲಿ ಮಹಿಳೆಯರು ನೆಮ್ಮದಿಂದ ಓಡಾಡದ ಸ್ಥಿತಿ ನಿರ್ಮಾಣವಾಗಿದೆ. ಇದು ಸಿದ್ದರಾಮಯ್ಯನವರ ಕೊಡುಗೆ ಎಂದು ಅವರು ಟೀಕಿಸಿದರು.

ಘನ ತ್ಯಾಜ್ಯ ವಿಲೇವಾರಿ ಕೂಡ ಕಾಂಗ್ರೆಸ್ ನಾಯಕರಿಗೆ ಹಣ ಮಾಡುವ ದಂಧೆಯಾಗಿದೆ. ಶುದ್ಧ ನೀರಿನಿಂದ ತುಂಬಿರಬೇಕಾಗಿದ್ದ ಕೆರೆಗಳಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರವೇ ಸಿಕ್ಕಿಲ್ಲ. ಎಲೆಕ್ಟ್ರಾನಿಕ್ಸ್‌ ಸಿಟಿಯಿಂದ ವಿಮಾನ ನಿಲ್ದಾಣಕ್ಕೆ ಹೋಗಬೇಕಾದವರು ಹೆಲಿ ಕಾಪ್ಟರ್ ಬಳಸಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಸುಂದರ ನಗರಿಯೆಂದು ಖ್ಯಾತಿ ಪಡೆದಿದ್ದ ರಾಜಧಾನಿ ಗುಂಡಿಗಳ ನಗರಿ ಎಂಬ ಕುಖ್ಯಾತಿಗೆ ಈಡಾಗಿದೆ ಎಂದು ಅವರು ಹಳಿದರು.

ಹಣ ಬಳಸದ ಸರ್ಕಾರ:

ಒಕ್ಕೂಟ ವ್ಯವಸ್ಥೆಯ ಬಗ್ಗೆ ನಂಬಿಕೆಯಿರುವ ಕೇಂದ್ರ ಸರ್ಕಾರ ಬೆಂಗಳೂರು ಅಭಿವೃದ್ಧಿಯ ಬಗ್ಗೆ ಸಾಕಷ್ಟು ಅನುದಾನ ನೀಡಿದೆ. ಆದರೆ, ದುಡ್ಡು ಹೊಡೆಯುವುದರಲ್ಲೇ ತಲ್ಲೀನವಾಗಿರುವ ರಾಜ್ಯ ಸರ್ಕಾರದ ಸಚಿವರು ಅದನ್ನು ಖರ್ಚು ಮಾಡಿಲ್ಲ ಎಂದು ಜಾವಡೇಕರ್‌ ಹರಿಹಾಯ್ದರು.

ಕೆರೆಗಳನ್ನು ಸ್ವಚ್ಛಗೊಳಿಸಲು ಅಮೃತ್‌ ಯೋಜನೆಯಡಿ ₹800 ಕೋಟಿ ನೀಡಿದೆ. ಅಸಮರ್ಥ, ಭ್ರಷ್ಟ ರಾಜ್ಯ ಸರ್ಕಾರ ಅದನ್ನು ಖರ್ಚು ಮಾಡಲು ಯಾವುದೇ ಕ್ರಮ ಕೈಗೊಂಡಿಲ್ಲ. ಒಳಚರಂಡಿ, ವಾಹನ ನಿಲುಗಡೆ ಸಂಕೀರ್ಣ, ಮೇಲ್ಸುತುವೆಗಳ ನಿರ್ಮಾಣಕ್ಕಾಗಿ ₹200 ಕೋಟಿ ನೀಡಿದ್ದರೂ ಬಳಕೆ ಮಾಡಿಲ್ಲ. ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಕ್ಕೆ ಚಾಲನೆಯೇ ಸಿಕ್ಕಿಲ್ಲ ಎಂದು ಟೀಕಿಸಿದರು.

ಕ್ರಿಮಿನಲ್ ಕ್ಯಾಬಿನೆಟ್‌ನ ದುರಾಡಳಿತ: ಅಶೋಕ್

ಸಿದ್ದರಾಮಯ್ಯ ಮತ್ತು ಅವರ ಕ್ರಿಮಿನಲ್ ಕ್ಯಾಬಿನೆಟ್‌ನ ದುರಾಡಳಿತದಿಂದಾಗಿ ಬೆಂಗಳೂರು ದೇಶದ ಮೂರನೇ ಅಸುರಕ್ಷಿತ ನಗರವಾಗಿ ಮಾರ್ಪಾಟಾಗಿದೆ. ದಕ್ಷಿಣ ಭಾರತದ ಅತ್ಯಾಚಾರದ ರಾಜಧಾನಿಯಾಗುವ ಅಪಾಯಕ್ಕೆ ಈ ನಗರ ಸಿಲುಕಿದೆ ಎಂದು ಬಿಜೆಪಿ ಶಾಸಕ ಆರ್. ಅಶೋಕ್ ಆರೋಪಿಸಿದರು.

ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ 14854 ಮಹಿಳಾ ದೌರ್ಜನ್ಯ ಪ್ರಕರಣಗಳು, 1,209 ಕೊಲೆ, 3,755 ದರೋಡೆಗಳು ನಡೆದಿವೆ. ಸರಗಳವು ಪ್ರಕರಣದ ಪ್ರಮಾಣ ಶೇ 32ರಷ್ಟು ಹೆಚ್ಚಾಗಿದೆ ಎಂದು ಅವರು ವಿವರಿಸಿದರು.

ಗುಂಡಿ ಮುಚ್ಚುವ ಹೆಸರಿನಲ್ಲಿ ₹4,600 ಕೋಟಿ, ವೈಟ್ ಟಾಪಿಂಗ್ ಹೆಸರಿನಲ್ಲಿ ₹1,000 ಕೋಟಿ ಹಣವನ್ನು ಖರ್ಚು ಮಾಡಿದ್ದಾಗಿ ಸರ್ಕಾರ ಹೇಳುತ್ತಿದೆ. ಚುನಾವಣೆಗೆ ಹಣ ಮಾಡಲು ಇಂತಹ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಆಪಾದಿಸಿದರು.

ವಸತಿ ಸಚಿವ ಕೃಷ್ಣಪ್ಪ, ಬೆಂಗಳೂರು ಅಭಿವೃದ್ಧಿ ಸಚಿವ ಜಾರ್ಜ್‌ ರಿಯಲ್ ಎಸ್ಟೇಟ್ ಡಾನ್‌ಗಳಾಗಿದ್ದಾರೆ. ತಮಗೆ ಬೇಕಾದ ಪ್ರದೇಶಗಳನ್ನು ಮಾಸ್ಟರ್ ಪ್ಲಾನ್‌ ಗೆ ಸೇರಿಸುತ್ತಾ ನಿವೇಶನಗಳಾಗಿ ರೂಪಾಂತರಿಸುತ್ತಿದ್ದಾರೆ. ಮತ್ತೊಬ್ಬ ಸಚಿವ ಡಿ.ಕೆ. ಶಿವಕುಮಾರ್ ಎಚ್ಎಂಟಿ ಕಂಪನಿಗೆ ಸೇರಿದ್ದ ಜಮೀನನ್ನು ಬಿಲ್ಡರ್ಸ್ ಮತ್ತು ರಿಯಲ್ ಎಸ್ಟೇಟ್ ಸಂಸ್ಥೆಗೆ ಮಾರಾಟ ಮಾಡಿದ್ದಾರೆ ಎಂದು ಅವರು ದೂರಿದರು.

ಬೆಂಗಳೂರು ಅಭಿವೃದ್ಧಿ ಸಚಿವ ಜಾರ್ಜ್ ರಿಯಲ್ ಎಸ್ಟೇಟ್‌ ಮಾಫಿಯಾ ಖಜಾಂಚಿಯಾಗಿದ್ದಾರೆ. ಎಲ್ಲ ಅಭಿವೃದ್ಧಿ ಯೋಜನೆಗಳಲ್ಲೂ ಕಮಿಷನ್ ಪಡೆಯುವುದಕ್ಕಷ್ಟೇ ಅವರು ಸೀಮಿತ
–ಪ್ರಕಾಶ್ ಜಾವಡೇಕರ್, ಕೇಂದ್ರ ಮಾನವ ಸಂಪನ್ಮೂಲ ಸಚಿವ

ಬೆಂಗಳೂರನ್ನು ಗಾರ್ಬೆಜ್‌ ಸಿಟಿ ಮಾಡಿದ್ದು ಬಿಜೆಪಿ

ಪಾವಗಡ: ಬಿಜೆಪಿಯವರು ಬೆಂಗಳೂರನ್ನು ಗಾರ್ಬೆಜ್ ಸಿಟಿ ಮಾಡಿ ಬಿಬಿಎಂಪಿ ಆಸ್ತಿಯನ್ನು ಅಡ ಇಟ್ಟಿದ್ದರು. ಅವರು ಮಾಡಿದ ಸಾಲವನ್ನು ನಾವು ತೀರಿಸಿ ಅಭಿವೃದ್ಧಿಪಡಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಗುರುವಾರ ಸೋಲಾರ್  ಪಾರ್ಕ್‌ ಉದ್ಘಾಟನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನಾಗಿ ಮಾಡಲು ಬೆಂಗಳೂರು ಸುತ್ತಮುತ್ತಲಿನ 30 ಹಳ್ಳಿಗಳನ್ನು ಸೇರಿಸಿದ್ದರು. ಆದರೆ ಅವುಗಳಿಗೆ ಮೂಲಸೌಕರ್ಯ ಕಲ್ಪಿಸಲು ಕೂಡಾ ಆಗಿರಲಿಲ್ಲ. ಅವರ ಕಾಲದಲ್ಲೇ ಪಾಲಿಕೆ ದಾಖಲೆಗಳಿಗೆ ಬೆಂಕಿ ಇಡಲಾಗಿತ್ತು. ರಾತ್ರೋ ರಾತ್ರಿ ಟೆಂಡರ್ ಕರೆದು ಅಕ್ರಮ ನಡೆದಿದ್ದು ಅವರ ಸರ್ಕಾರದ ಅವಧಿಯಲ್ಲೇ’ ಎಂದು ಆರೋಪಿಸಿದರು.

'ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗಲೂ ಬೆಂಗಳೂರು ಏನೂ ಅಭಿವೃದ್ಧಿ ಕಂಡಿರಲಿಲ್ಲ' ಎಂದು ಆಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.