ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಷರತ್ತಿಗೆ ಮಣಿದಿರುವ ಬಿ.ಇಡಿ ಕಾಲೇಜುಗಳು 200 ಛಾಪಾ ಕಾಗದದ ಮೇಲೆ ಮುಚ್ಚಳಿಕೆ ಪತ್ರ ಬರೆದುಕೊಟ್ಟಿರುವುದಲ್ಲದೇ , ಹಾಜರಾತಿ ಹಾಗೂ ಆಂತರಿಕ ಅಂಕಗಳ ವಿವರಗಳನ್ನು ಬುಧವಾರ ಸಂಜೆಯ ಒಳಗೆ ನೀಡುವ ವಿ.ವಿಯ ಆದೇಶಕ್ಕೆ ಒಪ್ಪಿಗೆ ಸೂಚಿಸಿವೆ.
ಬಿ.ಇಡಿ ಪರೀಕ್ಷೆ ಹಾಗೂ ಸಂಯೋಜನೆ ಸಂಬಂಧಪಟ್ಟಂತೆ ವಿ.ವಿ. ಮಂಗಳವಾರ ಕರೆದಿದ್ದ ಪ್ರಾಂಶುಪಾಲರ ಸಭೆಯಲ್ಲಿ ಭಾಗವಹಿಸಿದ್ದ ಸುಮಾರು 50ಕ್ಕೂ ಹೆಚ್ಚಿನ ಕಾಲೇಜುಗಳ ಪ್ರಾಂಶುಪಾಲರು ಷರತ್ತಿಗೆ ಬದ್ಧವಾಗಿರುವುದಾಗಿ ಛಾಪಾ ಕಾಗದದಲ್ಲಿ ಸಹಿ ಮಾಡಿದ್ದಾರೆ.
ಪರೀಕ್ಷೆಯ ಸಂದರ್ಭದಲ್ಲಿ ಹಾಜರಾತಿ ಪರಿಶೀಲನೆ ಮಾಡುವ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಮಾಡಲಾಗುತ್ತಿದೆ ಎಂದು ಪ್ರಾಂಶುಪಾಲರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿ.ವಿಯ ಕುಲಪತಿ ಪ್ರೊ.ಬಿ.ತಿಮ್ಮೇಗೌಡ, `ವಿದ್ಯಾರ್ಥಿಗಳ ಹಿತದೃಷ್ಟಿಯಿಂದಲೇ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಆದರೆ, ವಿ.ವಿಯ ನಿಯಮದ ಪ್ರಕಾರ ಹಾಜರಾತಿ ಸಮರ್ಪಕವಾಗಿರುವವರಿಗೆ ಮಾತ್ರ ಪರೀಕ್ಷೆಗೆ ಕೂರಲು ಅವಕಾಶ ನೀಡಲಾಗುತ್ತದೆ' ಎಂದು ತಿಳಿಸಿದರು.
ಜೂನ್ 20 ಮುಷ್ಕರ: ವಿದ್ಯಾರ್ಥಿಗಳ ಪ್ರವೇಶ ಪುಸ್ತಕದಲ್ಲಿರುವ ಸಹಿಯನ್ನು ಗಮನಿಸಿ ಪರೀಕ್ಷೆ ಕೂರುವ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲವಾದರೆ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಗಮನಿಸಬೇಕು. ಇಲ್ಲವಾದರೆ ಜೂನ್.20 ರಂದು ವಿದ್ಯಾರ್ಥಿಗಳೆಲ್ಲ ಸೇರಿ ವಿ.ವಿ. ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ಮಾಡಲಿದ್ದೇವೆ ಎಂದು ರಾಜ್ಯ ಅನುದಾನರಹಿತ ಬಿ.ಇಡಿ ಕಾಲೇಜು ಪ್ರಾಂಶುಪಾಲರು ಮತ್ತು ಅಧ್ಯಾಪಕರ ಒಕ್ಕೂಟದ ಕಾರ್ಯದರ್ಶಿ ಜೆ.ಎನ್.ನಟರಾಜ್ ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.