ADVERTISEMENT

ಬೆಲೆಯೇರಿಕೆ ವಿರುದ್ಧ ನಾಳೆ ಜೆಡಿಎಸ್ ರ್ಯಾಲಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2010, 10:20 IST
Last Updated 21 ಡಿಸೆಂಬರ್ 2010, 10:20 IST

ಬೆಂಗಳೂರು: ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಹಾಗೂ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿರುವುದನ್ನು ಖಂಡಿಸಿ ಜೆಡಿಎಸ್ ಬೆಂಗಳೂರು ನಗರ ಘಟಕವು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಇದೇ 22ರಂದು ನಗರದಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದೆ.

‘ಇತ್ತೀಚೆಗೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಈರುಳ್ಳಿ ಬೆಲೆ ನಗರದಲ್ಲಿ ಕೆ.ಜಿ.ಗೆ 80 ರೂಪಾಯಿಗೆ ಏರಿಕೆಯಾಗಿದೆ. ಇತರೆ ತರಕಾರಿ ಮತ್ತು ಆಹಾರ ಪದಾರ್ಥಗಳ ಬೆಲೆ ಕೂಡ ದುಬಾರಿಯಾಗಿವೆ. ಇದರಿಂದ ಮಧ್ಯಮ  ಹಾಗೂ ಬಡ ವರ್ಗದ ಜನತೆ ತೀವ್ರ ತೊಂದರೆ ಅನುಭವಿಸುವಂತಾಗಿದೆ’ ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಂ.ಎಸ್. ನಾರಾಯಣರಾವ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಅಕಾಲಿಕ ಮಳೆ ಮತ್ತು ಪ್ರವಾಹದಿಂದಾಗಿ ಆಹಾರ ಬೆಳೆ ಉತ್ಪಾದನೆ ಕ್ಷೀಣಿಸಿದೆ ಎಂಬ ಸಬೂಬು ಹೇಳುವ ರಾಜ್ಯ ಸರ್ಕಾರ, ಇದರ ನಿಯಂತ್ರಣಕ್ಕೆ ಪರ್ಯಾಯ ಮಾರ್ಗೋಪಾಯ ಕಂಡುಕೊಳ್ಳಬೇಕಿತ್ತು. ಆದರೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿರುವುದರಿಂದ ಜನತೆ ತೊಂದರೆಪಡುವಂತಾಗಿದೆ’ ಎಂದು ದೂರಿದರು.

‘ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಯಂತ್ರಣಕ್ಕೆ ಆಯೋಗ ರಚಿಸುವಂತೆ ಕೋರಿದ್ದರೂ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ. ಇದನ್ನು ಖಂಡಿಸಿ ಇದೇ 22ರಂದು ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಜೆಡಿಎಸ್ ಕಚೇರಿಯಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ವಾಹನಗಳನ್ನು ತಳ್ಳಿಕೊಂಡು ಹೋಗುವ ಮೂಲಕ ಪ್ರತಿಭಟಿಸಲಾಗುವುದು’ ಎಂದು ಹೇಳಿದರು.

ಗೂಂಡಾಗಳೊಂದಿಗೆ ಸಚಿವರ ರ್ಯಾಲಿ: ‘ನಗರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಸೇರಿದ ಗೋಪಾಲಪುರ ಹಾಗೂ ದಾಸನಪುರ ಕ್ಷೇತ್ರಗಳಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಮಾಕಳಿ ನಾಗರಾಜ್ ಹಾಗೂ ಶ್ರೀನಿವಾಸಮೂರ್ತಿ (ಡಾಬಾ ಸೀನಾ) ಅವರು ಜೆಡಿಎಸ್ ಅಭ್ಯರ್ಥಿಗಳು ಪ್ರಚಾರ ನಡೆಸದಂತೆ ಬೆದರಿಕೆ ಹಾಕುತ್ತಿದ್ದಾರೆ. ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ಈ ಇಬ್ಬರು ಅಭ್ಯರ್ಥಿಗಳ ಪರ ಗೃಹ ಸಚಿವ ಆರ್. ಅಶೋಕ ಭಾನುವಾರ ಪ್ರಚಾರ ನಡೆಸಿರುವುದರಿಂದ ಪೊಲೀಸರು ಸಹ ಅಸಹಾಯಕರಾಗಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ ಆರೋಪಿಸಿದರು.

‘ಬೆಂಗಳೂರು ನಗರ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿನ 26 ಕ್ಷೇತ್ರಗಳಲ್ಲಿ 8 ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಡೆ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಹಾಗೆಯೇ ಬೆಂಗಳೂರು ಉತ್ತರ ತಾಲ್ಲೂಕಿನ 22 ಕ್ಷೇತ್ರಗಳಲ್ಲಿ 17, ದಕ್ಷಿಣ ತಾಲ್ಲೂಕಿನ 12ರ ಪೈಕಿ 10, ಪೂರ್ವ ತಾಲ್ಲೂಕಿನ 11ರ ಪೈಕಿ 10 ಹಾಗೂ ಆನೇಕಲ್ ತಾಲ್ಲೂಕಿನ 27 ಕ್ಷೇತ್ರಗಳ ಪೈಕಿ 22 ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ’ ಎಂದು ಜೆಡಿಎಸ್ ಮುಖಂಡ ಅಂದಾನಪ್ಪ ಹೇಳಿದರು.

ಬಿಬಿಎಂಪಿ ಜೆಡಿಎಸ್ ನಾಯಕ ಪದ್ಮನಾಭರೆಡ್ಡಿ, ‘ಬಿಜೆಪಿ ಮತ್ತು ಕಾಂಗ್ರೆಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಹಗರಣಗಳಿಂದ ಬೇಸತ್ತ ಮತದಾರರು ಜೆಡಿಎಸ್ ಪಕ್ಷವನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸವಿದೆ. ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಪಕ್ಷದ ಅಭ್ಯರ್ಥಿಗಳಿಗೆ ಬೆದರಿಕೆ ಹಾಕಿ ಪ್ರಚಾರಕ್ಕೆ ಅಡ್ಡಿಪಡಿಸುತ್ತಿದ್ದು, ಅವರಿಗೆ ಜನತೆ ತಕ್ಕ ಪಾಠ ಕಲಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.