ADVERTISEMENT

ಬೇಸಿಗೆ ಶಿಬಿರ ಪ್ರೋತ್ಸಾಹಿಸಲು ಪೋಷಕರಿಗೆ ಕರೆ

​ಪ್ರಜಾವಾಣಿ ವಾರ್ತೆ
Published 1 ಮೇ 2011, 20:15 IST
Last Updated 1 ಮೇ 2011, 20:15 IST

ಕೃಷ್ಣರಾಜಪುರ : ‘ಒಂದೇ ಶಾಲೆಯಲ್ಲಿ ಓದಿದ ಮಕ್ಕಳು ಪರಸ್ಪರ ಅರಿವು ಮೂಡಿಸಿಕೊಳ್ಳಲು ಬೇಸಿಗೆ ಶಿಬಿರಗಳು ಸಹಕಾರಿಯಾಗಿವೆ. ಆದ್ದರಿಂದ ಮಕ್ಕಳು ಹೆಚ್ಚು ಹೆಚ್ಚಾಗಿ ಶಿಬಿರಗಳಲ್ಲಿ ಭಾಗವಹಿಸಲು ಪೋಷಕರು ಪ್ರೋತ್ಸಾಹಿಸಬೇಕು’ ಎಂದು ಪಾಲಿಕೆ ಸದಸ್ಯೆ ಆರ್.ಮಂಜುಳಾ ದೇವಿ ಹೇಳಿದರು.

ರಂಗಪಯಣ ಟ್ರಸ್ಟ್ ವತಿಯಿಂದ ಬಿ.ನಾರಾಯಣಪುರ ಸರ್ಕಾರಿ ಶಾಲೆಯ ಆವರಣದಲ್ಲಿ ಏರ್ಪಡಿಸಿದ್ದ ಬೇಸಿಗೆ ಶಿಬಿರ ಮುಕ್ತಾಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.

‘ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆ ಶಿಬಿರಗಳ್ನು ಹೆಚ್ಚು ಹೆಚ್ಚಾಗಿ ತೆರೆಯಬೇಕು. ಇದಕ್ಕೆ ಬಿಬಿಎಂಪಿ ವತಿಯಿಂದ ನೆರವು ಕೊಡಿಸಲಾಗುವುದು. ರಂಗ ಪಯಣ ಟ್ರಸ್ಟ್ ಗ್ರಾಮೀಣ ಪ್ರದೇಶಕ್ಕೆ ಆದ್ಯತೆ ನೀಡಿ ಶಿಬಿರ ನಡೆಸುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ’ ಎಂದು ಅವರು ತಿಳಿಸಿದರು.

ಟ್ರಸ್ಟ್‌ನ ಸಂಯೋಜಕಿ ನಯನ ಜೆ. ಸೂಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ನೆನಪಿನ ಕಾಣಿಕೆ ಹಾಗೂ ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆ ಬಿ.ನಾರಾಯಣಪುರ ಘಟಕದ ಅಧ್ಯಕ್ಷ ವಿಠಲಗೌಡ , ಉಪಾಧ್ಯಕ್ಷ ಬಾಬು ಗೌಡ , ಟ್ರಸ್ಟ್‌ನ ಅಧ್ಯಕ್ಷ ರಾಘವೇಂದ್ರ, ಸಂಘಟನಾ ಟ್ರಸ್ಟಿ ಶ್ರೀನಾಥ್, ಕಲಾವಿದ ಡಾ.ಸುಬ್ರಮಣ್ಯ, ಸಾಮಾಜಿಕ ಕಾರ್ಯಕರ್ತರಾದ ರಾಮಲಕ್ಷ್ಮಣ, ತಾಯಪ್ಪ, ನಾಗೇಶ ರಾವ್, ಕಿರಣ ಬಾಬು, ಸದಾನಂದ  ಮತ್ತಿತರು ಉಪಸ್ಥಿತರಿದ್ದರು. ರಂಗಭೂಮಿ ಕಲಾವಿದ ವೆಂಕಟೇಶ್ ಸ್ವಾಗತಿಸಿ, ಧನ್ವಂತ್ರಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.