ADVERTISEMENT

ಬೈಕ್ ಸವಾರನ ಅಡ್ಡಗಟ್ಟಿ ಹಣ ದರೋಡೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 19:30 IST
Last Updated 16 ಏಪ್ರಿಲ್ 2012, 19:30 IST

ಬೆಂಗಳೂರು: ದ್ವಿಚಕ್ರ ವಾಹನ ಸವಾರರೊಬ್ಬರನ್ನು ದುಷ್ಕರ್ಮಿಗಳು ಅಡ್ಡಗಟ್ಟಿ ಹಲ್ಲೆ ನಡೆಸಿ 38 ಲಕ್ಷ ರೂಪಾಯಿ ಹಣ ದರೋಡೆ ಮಾಡಿರುವ ಘಟನೆ ಮಲ್ಲೇಶ್ವರದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಮಲ್ಲೇಶ್ವರದ ಪೈಪ್‌ಲೈನ್ ರಸ್ತೆ ನಿವಾಸಿ ಶಿವಣ್ಣ ದರೋಡೆಗೆ ಒಳಗಾದವರು. ಅವರು ನರಹರಿ ಎಂಬ ರಿಯಲ್ ಎಸ್ಟೇಟ್ ಉದ್ಯಮಿಯ ಕಚೇರಿಯಲ್ಲಿ ಉದ್ಯೋಗಿಯಾಗಿದ್ದಾರೆ. ಸಂಪಿಗೆ ರಸ್ತೆಯ ನರಹರಿ ಅವರ ಕಚೇರಿ ಇದೆ. ಶಿವಣ್ಣ ಅವರು ಆ ಕಚೇರಿಯಿಂದ ನರಹರಿ ಅವರ ಶೇಷಾದ್ರಿಪುರ ನಿವಾಸಕ್ಕೆ ರಾತ್ರಿ ಹಣ ತೆಗೆದುಕೊಂಡು ಹೋಗುತ್ತಿದ್ದಾಗ ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಿವಣ್ಣ ಅವರನ್ನು ಎರಡು ಬೈಕ್‌ಗಳಲ್ಲಿ ಹಿಂಬಾಲಿಸಿ ಬಂದ ದುಷ್ಕರ್ಮಿಗಳು ಸಿರೂರು ಪಾರ್ಕ್ ಬಳಿ ಅಡ್ಡಗಟ್ಟಿ ಹಲ್ಲೆ ನಡೆಸಿ, ದರೋಡೆ ಮಾಡಿದ್ದಾರೆ. ಗಾಯಗೊಂಡಿರುವ ಶಿವಣ್ಣ ಅವರು ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನಿವೇಶನವೊಂದನ್ನು ಮಾರಿದ್ದ ಸಂಬಂಧ ಬಂದಿದ್ದ ಹಣ ದರೋಡೆಯಾಗಿದೆ ಎಂದು ವಿಚಾರಣೆ ವೇಳೆ ನರಹರಿ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನರಹರಿ ಅವರು ಕ್ರಿಕೆಟ್ ಬೆಟ್ಟಿಂಗ್ ಜಾಲದಲ್ಲೂ ಭಾಗಿಯಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮಲ್ಲೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ; ಐದು ಮಂದಿಗೆ ಗಾಯ: ನಗರದ ಹೆಣ್ಣೂರು ಅಂಡರ್‌ಪಾಸ್ ಸಮೀಪ ಸೋಮವಾರ ಬೆಳಿಗ್ಗೆ ಮ್ಯಾಕ್ಸಿ ಕ್ಯಾಬ್ ವಾಹನವೊಂದು ಮಗುಚಿ ಬಿದ್ದು ಐದು ಮಂದಿ ಗಾಯಗೊಂಡಿದ್ದಾರೆ.ಶಾಂತಾ, ಇರ್ಫಾನ್, ವಜೀರ್, ಹನುಮಂತ ಮತ್ತು ತ್ರಿಜಾವತಿ ಗಾಯಗೊಂಡವರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಮ್ಯಾಕ್ಸಿ ಕ್ಯಾಬ್‌ನ ಚಾಲಕ ಬಲ ತಿರುವು ಪಡೆದುಕೊಳ್ಳುವ ಯತ್ನದಲ್ಲಿ ನಿಯಂತ್ರಣ ತಪ್ಪಿ ಅಂಡರ್‌ಪಾಸ್‌ನ ಗೋಡೆಗೆ ವಾಹನ ಗುದ್ದಿಸಿದ. ಇದರಿಂದಾಗಿ ಅಡ್ಡಾದಿಡ್ಡಿ ಚಲಿಸಿದ ವಾಹನ ಮಗುಚಿ ಬಿದ್ದು, ಐದು ಮಂದಿ ಗಾಯಗೊಂಡರು. ಘಟನೆ ನಂತರ ಚಾಲಕ ಪರಾರಿಯಾಗಿದ್ದಾನೆ. ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಣಸವಾಡಿ ಸಂಚಾರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.