ADVERTISEMENT

ಬ್ಯಾಂಕ್ ಸಿಬ್ಬಂದಿಯ 25 ಲಕ್ಷ ದರೋಡೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 19:40 IST
Last Updated 21 ಸೆಪ್ಟೆಂಬರ್ 2011, 19:40 IST

ಬೆಂಗಳೂರು: ಬ್ಯಾಂಕ್‌ಗೆ ಹಣ ಕಟ್ಟಲು ಹೋಗುತ್ತಿದ್ದ ಮತ್ತೊಂದು ಬ್ಯಾಂಕ್‌ನ ಸಿಬ್ಬಂದಿಯನ್ನು ದುಷ್ಕರ್ಮಿಗಳು ಬೈಕ್‌ನಲ್ಲಿ ಹಿಂಬಾಲಿಸಿ 25 ಲಕ್ಷ ರೂಪಾಯಿ ದರೋಡೆ ಮಾಡಿದ ಘಟನೆ ಯಶವಂತಪುರದ ಪೈಪ್‌ಲೈನ್ ರಸ್ತೆಯಲ್ಲಿ ಬುಧವಾರ ಹಾಡಹಗಲೇ ನಡೆದಿದೆ.

ಈ ಸಂಬಂಧ ಶ್ಯಾಮರಾವ್ ವಿಠಲರಾವ್ ಕೋ ಆಪರೇಟಿವ್ ಬ್ಯಾಂಕ್‌ನ ಯಶವಂತಪುರ ಶಾಖೆಯ ವ್ಯವಸ್ಥಾಪಕಿ ರೂಪಾ ಅವರು ದೂರು ಕೊಟ್ಟಿದ್ದಾರೆ.

ಶ್ಯಾಮರಾವ್ ವಿಠಲರಾವ್ ಕೋ ಆಪರೇಟಿವ್ ಬ್ಯಾಂಕ್‌ನ ಸಿಬ್ಬಂದಿಯಾದ ಮಧುಕರ್ ಮತ್ತು ಮಂಚೇಗೌಡ ಅವರು 25 ಲಕ್ಷ ರೂಪಾಯಿ ಹಣವನ್ನು ಬ್ಯಾಗ್‌ನಲ್ಲಿ ಇಟ್ಟುಕೊಂಡು, ವಿಜಯಾ ಬ್ಯಾಂಕ್‌ನ ಯಶವಂತಪುರ ವೃತ್ತ ಶಾಖೆಗೆ ಕಟ್ಟಲು ನಡೆದು ಹೋಗುತ್ತಿದ್ದರು. ಅವರನ್ನು ಬೈಕ್‌ನಲ್ಲಿ ಹಿಂಬಾಲಿಸಿ ಬಂದ ಇಬ್ಬರು ದುಷ್ಕರ್ಮಿಗಳು ಮಂಚೇಗೌಡ ಅವರ ಬಳಿ ಇದ್ದ ಹಣದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಶ್ಯಾಮರಾವ್ ವಿಠಲರಾವ್ ಕೋ ಆಪರೇಟಿವ್ ಬ್ಯಾಂಕ್‌ನ ಸಿಬ್ಬಂದಿ ವಾರದಲ್ಲಿ ಮೂರು ಬಾರಿ ವಿಜಯಾ ಬ್ಯಾಂಕ್‌ನ ಯಶವಂತಪುರ ವೃತ್ತ ಶಾಖೆಗೆ ಹಣ ಕಟ್ಟುತ್ತಿದ್ದರು. ಪ್ರತಿ ಬಾರಿಯೂ ಮಧುಕರ್ ಮತ್ತು ಮಂಚೇಗೌಡ ಅವರೇ ಹಣ ಕಟ್ಟುವ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

`ಘಟನೆಯ ಬಗ್ಗೆ ಮಧುಕರ್ ಮತ್ತು ಮಂಚೇಗೌಡ ಅವರು ಗೊಂದಲಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆಟೊದಲ್ಲಿ ಬಂದು ಬ್ಯಾಂಕ್‌ನಿಂದ ಸ್ವಲ್ಪ ದೂರದಲ್ಲಿ ಇಳಿದು ನಡೆದು ಹೋಗುತ್ತಿದ್ದಾಗ ಕಿಡಿಗೇಡಿಗಳು ಹಣ ದರೋಡೆ ಮಾಡಿದರೆಂದು ಒಂದು ಬಾರಿ ಅವರು ಹೇಳಿಕೆ ಕೊಟ್ಟಿದ್ದರು. ಕೋ ಅಪರೇಟಿವ್ ಬ್ಯಾಂಕ್‌ನಿಂದ ನಡೆದು ಬರುತ್ತಿದ್ದಾಗ ದುಷ್ಕರ್ಮಿಗಳು ಈ ಕೃತ್ಯ ಎಸಗಿದರು ಎಂದು ಮತ್ತೊಮ್ಮೆ ಹೇಳಿಕೆ ಕೊಟ್ಟರು.

ಇದರಿಂದಾಗಿ ಅವರೇ ಹಣವನ್ನು ದೋಚಿ ಸುಳ್ಳು ಹೇಳುತ್ತಿದ್ದಾರೆ ಎಂಬ ಶಂಕೆ ಮೂಡಿದೆ~ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

`ಪ್ರಕರಣದ ತನಿಖೆಗೆ ಯಶವಂತಪುರ, ಗಂಗಮ್ಮನಗುಡಿ ಮತ್ತು ಆರ್‌ಎಂಸಿ ಯಾರ್ಡ್ ಠಾಣೆ ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದೆ~ ಎಂದು ಉತ್ತರ ವಿಭಾಗದ ಡಿಸಿಪಿ ಎಚ್.ಎಸ್.ರೇವಣ್ಣ ಅವರು `ಪ್ರಜಾವಾಣಿ~ಗೆ ತಿಳಿಸಿದರು. ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.