ಬೆಂಗಳೂರು: ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರ ಭದ್ರತಾ ಅಧಿಕಾರಿಯಾಗಿ (ಎಡಿಸಿ) ಸೇವೆ ಸಲ್ಲಿಸುತ್ತಿರುವ ಕೆ.ಸಿ.ವಿ. ಮಾನೆ ಅವರಿಗೆ ಐಪಿಎಸ್ ಹುದ್ದೆಗೆ ಬಡ್ತಿ ಕೊಡಿಸಲು ರಾಜ್ಯ ಗೃಹ ಸಚಿವರೇ ಪ್ರಯತ್ನ ನಡೆಸುತ್ತಿರುವುದಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.
ಅಪರಾಧ ತಡೆ, ಕಾನೂನು ಸುವ್ಯವಸ್ಥೆ ನಿರ್ವಹಣೆ, ತನಿಖೆ ಮುಂತಾದ ವಿಷಯಗಳಲ್ಲಿ ತರಬೇತಿ ಪಡೆಯುವ ಸಿವಿಲ್ ಪೊಲೀಸ್ ವಿಭಾಗದ ಅರ್ಹ ಅಧಿಕಾರಿಗಳನ್ನು ಮಾತ್ರ ಐಪಿಎಸ್‌ಗೆ ಪರಿಗಣಿಸಬೇಕಾಗುತ್ತದೆ. ರಾಜ್ಯ ಸಶಸ್ತ್ರ ಮೀಸಲು ಪಡೆ, ವಯರ್‌ಲೆಸ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿಗಳಿಗೆ ಪೊಲೀಸ್ ಮುಖ್ಯ ವಾಹಿನಿ ಕರ್ತವ್ಯಗಳ ಬಗ್ಗೆ ತರಬೇತಿ ಇರುವುದಿಲ್ಲ. ಇದರಿಂದಾಗಿ ಸೇವೆ ಸಲ್ಲಿಸಲು ಅವರಿಗೆ ಕೌಶಲ್ಯ ಇರುವುದಿಲ್ಲ. ಆದ್ದರಿಂದಲೇ ಸಿವಿಲ್ ಸೇವೆಯಲ್ಲಿರುವ ಅರ್ಹ ಸಿಬ್ಬಂದಿಗೆ ಮಾತ್ರ ಐಪಿಎಸ್ ಹುದ್ದೆಗೆ ಬಡ್ತಿ ನೀಡಲಾಗುತ್ತದೆ.
ಸಶಸ್ತ್ರ ಮೀಸಲು ಪಡೆಯ ಎಸ್ಪಿಯಾಗಿರುವ ಮಾನೆ ಅವರಿಗೆ ನಿಯಮದ ಪ್ರಕಾರ ಐಪಿಎಸ್‌ಗೆ ಬಡ್ತಿ ನೀಡಲು ಬರುವುದಿಲ್ಲ. ಆದರೂ ಮುಖ್ಯಮಂತ್ರಿ ಅವರಿಗೆ (ಬಿ.ಎಸ್. ಯಡಿಯೂರಪ್ಪ ಅವರ ಅಧಿಕಾರ ಅವಧಿಯಲ್ಲಿ) ಪತ್ರ ಬರೆದಿದ್ದ (2010 ಮೇ 26) ರಾಜ್ಯಪಾಲರು, ಮಾನೆ ಅವರಿಗೆ ಐಪಿಎಸ್ ಹುದ್ದೆಗೆ ಬಡ್ತಿ ನೀಡಲು ಪರಿಗಣಿಸಿ ಎಂದು ಮನವಿ ಮಾಡಿದ್ದರು. ಆದರೆ ಕಾರಣಾಂತರಗಳಿಂದ ಬಡ್ತಿ ಸಾಧ್ಯವಾಗಿರಲಿಲ್ಲ.
ಗೃಹ ಸಚಿವ ಆರ್. ಅಶೋಕ, ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೆ. 2ರಂದು ಪತ್ರ ಬರೆದು ಮಾನೆ ಅವರ ವೃಂದ ಬದಲಾವಣೆ ಮಾಡುವ ಬಗ್ಗೆ ಅಭಿಪ್ರಾಯ ಕೇಳಿದ್ದಾರೆ.
`ಹಲವು ವರ್ಷಗಳಿಂದ ಎಡಿಸಿಯಾಗಿ ಸೇವೆ ಸಲ್ಲಿಸುತ್ತಿರುವ ಮಾನೆ ಅವರು ಎಸ್ಪಿಯಾಗಿ ಪದೋನ್ನತಿ ಪಡೆದಿದ್ದಾರೆ. ಆದಾಗ್ಯೂ ಅವರು ಎಡಿಸಿ ಹುದ್ದೆಯಲ್ಲಿ ಮುಂದುವರೆಯುತ್ತಿದ್ದಾರೆ. ಕೇಂದ್ರ ಗೃಹ ಇಲಾಖೆಯ ಆದೇಶವೊಂದರ ಪ್ರಕಾರ ಎಡಿಸಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ ಅವರನ್ನು ಸಿವಿಲ್ ಸೇವೆಯಲ್ಲಿಯೇ ಇದ್ದಾರೆ ಎಂದು ಪರಿಗಣಿಸಬೇಕಾಗುತ್ತದೆ. ಮಾನೆ ಅವರು ನಿಷ್ಠಾವಂತ ಮತ್ತು ದಕ್ಷ ಅಧಿಕಾರಿಯಾಗಿದ್ದು ಐಪಿಎಸ್ ಅಧಿಕಾರಿ ನಿರ್ವಹಿಸುವ ಎಲ್ಲ ಕರ್ತವ್ಯಗಳನ್ನೂ ಸಮರ್ಪಕವಾಗಿ ನಿರ್ವಹಿಸುತ್ತಿದ್ದಾರೆ~ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
`ಈ ಎಲ್ಲ ಅಂಶಗಳನ್ನು ಪರಿಗಣಿಸಿ 05-11-1997ರಿಂದ ಪೂರ್ವಾನ್ವಯ ಆಗುವಂತೆ ಮಾನೆ ಅವರನ್ನು ಸಶಸ್ತ್ರ ಪೊಲೀಸ್ ವಿಭಾಗದಿಂದ ಸಿವಿಲ್ ಪೊಲೀಸ್ ಇಲಾಖೆಗೆ ವೃಂದ ಬದಲಾವಣೆ ಮಾಡುವ ಬಗ್ಗೆ ಅಭಿಪ್ರಾಯ ತಿಳಿಸಿ~ ಎಂದು ಪತ್ರದಲ್ಲಿ ಕೇಳಿದ್ದಾರೆ.
ವೃಂದ ಬದಲಾವಣೆ ಸಾಧ್ಯವಿಲ್ಲ ಎಂದು ಗೊತ್ತಿದ್ದರೂ ಮಾನೆ ಅವರಿಗೆ ಬಡ್ತಿ ಕೊಡಿಸಲು ಗೃಹ ಸಚಿವರು ಯತ್ನಿಸುತ್ತಿದ್ದಾರೆ. ಇದೇ ಉದ್ದೇಶದಿಂದ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ನಿಯಮ ಮೀರಿ ಬಡ್ತಿ ಕೊಡಿಸುವುದರಿಂದ ಅರ್ಹ ಅಧಿಕಾರಿಗಳು ಬಡ್ತಿಯಿಂದ ವಂಚಿತರಾಗುತ್ತಾರೆ. ಅಧಿಕಾರಿಗಳ ಸ್ಥೈರ್ಯಕ್ಕೂ ಧಕ್ಕೆ ಆಗಲಿದೆ ಎಂದು ಅಧಿಕಾರಿಗಳು ಅಳಲು ತೋಡಿಕೊಂಡಿದ್ದಾರೆ.
`ವೃಂದ ಬದಲಾವಣೆ ಸಾಧ್ಯವಿಲ್ಲ~
ಗೃಹ ಸಚಿವರ ಪತ್ರಕ್ಕೆ ವಿಸ್ತೃತ ಉತ್ತರ ನೀಡಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎನ್. ಅಚ್ಯುತರಾವ್ `ಸಿವಿಲ್ ಪೊಲೀಸ್ ಮತ್ತು ಸಶಸ್ತ್ರ ಮೀಸಲು ಪಡೆಯನ್ನು ವಿಭಿನ್ನ ಉದ್ದೇಶಕ್ಕಾಗಿ ರಚಿಸಲಾಗಿದೆ. ಸಿವಿಲ್ ಪೊಲೀಸ್ ಅಧಿಕಾರಿಗಳು ಅಪರಾಧ ತಡೆ, ಅಪರಾಧ ಪ್ರಕರಣಗಳ ತನಿಖೆ, ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆ ಮುಂತಾದ ವಿಷಯಗಳಲ್ಲಿ ತರಬೇತಿ ಪಡೆದಿರುತ್ತಾರೆ. ಇದೇ ಉದ್ದೇಶಕ್ಕಾಗಿಯೇ ಡಿವೈಎಸ್ಪಿ ದರ್ಜೆಯ ಅಧಿಕಾರಿಗಳನ್ನು ಜಿಲ್ಲೆಗಳಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ. ಆದರೆ ಇಂತಹ ತರಬೇತಿ ಸಶಸ್ತ್ರ ಮೀಸಲು ಪಡೆಯ ಅಧಿಕಾರಿಗಳಿಗೆ ಇರುವುದಿಲ್ಲ~ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
`ಸಶಸ್ತ್ರ ಮೀಸಲು ಪಡೆಯ ಅಧಿಕಾರಿಗಳು ಸಿಬ್ಬಂದಿ ನಿರ್ವಹಣೆ ಸೇರಿದಂತೆ ಬೇರೆಯದ್ದೇ ವಿಷಯಗಳಲ್ಲಿ ತರಬೇತಿ ಪಡೆದಿರುತ್ತಾರೆ. ಕೇಂದ್ರ ಸರ್ಕಾರ ತನ್ನ ಆದೇಶದಲ್ಲಿ ಸಿವಿಲ್ ಸೇವೆಗೆ ಸಮಾನ ಆಗಿರುವ ಹುದ್ದೆಯ ಅಧಿಕಾರಿಗಳನ್ನು ಪರಿಗಣಿಸಿ ಎಂದ ಸ್ಪಷ್ಟವಾಗಿ ಹೇಳಿದೆ. ಆದ್ದರಿಂದ ಮಾನೆ ಅವರ ವೃಂದ ಬದಲಾವಣೆ ಮಾಡಲಾಗದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.